Advertisement
2:49 AM Thursday 7-December 2023

ಭಾರತ ಕಮ್ಯುನಿಸ್ಟ್ ಪಕ್ಷದಿಂದ ಫೆ.28ರ ವರೆಗೆ ಜನಾಂದೋಲನ

22/02/2023

ಮಡಿಕೇರಿ ಫೆ.22 : ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ಟಿನಲ್ಲಿ ಕೊಡಗನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕೊಡಗು ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಬಿ.ರಮೇಶ್ ಫೆ.28ರ ವರೆಗೆ ಜನಾಂದೋಲನ ನಡೆಯಲಿದೆ ಎಂದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಜನಾಂದೋಲನ ಆರಂಭವಾಗಿದ್ದು, ಸರ್ಕಾರದ ವೈಫಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದೆಂದರು.
2018-19ನೇ ಸಾಲಿನಲ್ಲಿ ಕೊಡಗಿನಲ್ಲಿ ಪ್ರಳಯ ಸಂದರ್ಭದಲ್ಲಿ ಬಹಳಷ್ಟು ಮಂದಿ ಮನೆ, ಆಸ್ತಿ ಕಳೆದುಕೊಂಡರು. ಇವರಿಗೆ ನಿವೇಶನ ಕೊಡಲು ಸರಕಾರಕ್ಕೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ ರಮೇಶ್, ಕೊಡಗಿಗೆ ರೈಲುತರುವುದೆಂದು ಭಾರತೀಯ ಜನತಾ ಪಕ್ಷದವರೇ ಆದ ಜನಪ್ರತಿನಿಧಿಗಳು ಆಗಾಗ ಘೋಷಿಸುತ್ತಿರುವುದಾದರೂ ಇಂದಿಗೂ ಅದು ನನಸಾಗಲಿಲ್ಲ. ಕೊಡಗಿನ ರೈತರು ಬೆಳೆಯುತ್ತಿರುವ ಕಾಫಿ, ಭತ್ತ, ಕರಿಮೆಣಸು ಮೊದಲಾದ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗವಂತೆ ಮಾಡಲು ಸರಕಾರಗಳಿಗೆ ಸಾಧ್ಯವಾಗಲಿಲ್ಲ, ಕಾಡಾನೆ ಹಾಗೂ ಕಾಡು ಪ್ರಾಣಿಗಳಿಂದ ಮನುಷ್ಯ ಮತ್ತು ಬೆಳೆ ನಾಶವಾಗುತ್ತಿದ್ದರೂ ಸರಕಾರಗಳಿಗೆ ಸೂಕ್ತ ಪರಿಹಾರ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ದುರಸ್ತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೊಡಗಿಗಾಗಿ ಪ್ರತ್ಯೇಕವಾದ ಯೋಜನೆಗಳನ್ನು ಘೋಷಿಸಿಲ್ಲ. ಕಾರ್ಮಿಕರು ಮತ್ತು ರೈತರ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸದರು.
ಜಿಲ್ಲೆಯಲ್ಲಿ ಎರಡು ಹೊಸ ತಾಲೂಕುಗಳು ರಚನೆಲಾಗಿವೆ ಆದರೆ, ಅವುಗಳ ಕಾರ್ಯನಿರ್ವಹಣೆಗೆ ಬೇಕಾದ ಸೌಕರ್ಯಗಳನ್ನು ಇನ್ನೂ ವ್ಯವಸ್ಥಿತಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಘಟಕದ ಪ್ರಮುಖ ಬೇಡಿಕೆಗಳಾದ ಸಂರಚನಾ ಯೋಜನೆಗಳಲ್ಲಿ ಸರಕಾರದ ಹೂಡಿಕೆಯನ್ನು ಹೆಚ್ಚಿಸಬೇಕು, ಉಚಿತವಾಗಿ ನೀಡುವ 5.ಕೆ.ಜಿ.ಪಡಿತರ ಜೊತೆಯಲ್ಲಿಯೇ 5 ಕೆ.ಜಿ.ಸಬ್ಸಿಡಿ ಆಧರಿತ ಪಡಿತರವನ್ನೂ ಪುನಃ ಪ್ರಾರಂಭಿಸಬೇಕು, ಹೆಚ್ಚಿನ ವೇತನದೊಂದಿಗೆ ಉದ್ಯೋಗ ಖಾತ್ರಿಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಬೇಕು, ಸಂಪತ್ತು ತೆರಿಗೆ ಮತ್ತು ಅನುವಂಶೀಯ ತೆರಿಗೆಯನ್ನು ಜಾರಿಗೆತರಬೇಕು, ಶ್ರೀಮಂತರಿಗೆ ಕೊಡುವ ತೆರಿಗೆ ವಿನಾಯಿತಿಯನ್ನು ಹಿಂಪಡೆಯಬೇಕು ಮತ್ತು ಅತೀ ಶ್ರೀಮಂತರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಔಷಧಿಗಳನ್ನೂ ಒಳಗೊಂಡು ಆಹಾರ ಮತ್ತು ಇತರ ವಸ್ತುಗಳ ಮೇಲಿನ ಜಿ.ಎಸ್.ಟಿ ಯನ್ನು ಹಿಂಪಡೆಯಬೇಕು, ರೈತರು, ಕೂಲಿಗಾರರು ಮತ್ತು ಮಹಿಳೆಯರ ಖಾಸಗೀ ಸೇರಿದಂತೆ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು, ಲೂಟಿಕೋರ ಕಾರ್ಪರೇಟ್ ಸುಲಿಗೆಗೆ ನೆರವಾಗುವರೈತ ವಿರೋಧಿ ಕೃಷಿ ಕಾಯಿದೆಗಳು, ಕಾರ್ಮಿಕರ ವಿರೋಧಿ ಕಾರ್ಮಿಕ ಕಾಯಿದೆಗಳು ಮತ್ತು ನೂತನರಾಷ್ಟ್ರೀಯ ಶಿಕ್ಷಣ ನೀತಿ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜ್ಞೆ ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ವಾಪಾಸು ಪಡೆಯಬೇಕು, ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಎ.ಸಿ.ಸಾಬು, ಎಚ್.ಆರ್.ಶಿವಪ್ಪ, ಎನ್.ಡಿ.ಕುಟ್ಟಪ್ಪ ಉಪಸ್ಥಿತರಿದ್ದರು.