ಮಡಿಕೇರಿ ಫೆ.22 : ಕೊಡಗು ಜಿಲ್ಲೆಯಲ್ಲಿ ಕನ್ನಡ, ತುಳು, ಕೊಡವ, ಮಲೆಯಾಳಿ, ತಮಿಳು ಮತ್ತು ತೆಲುಗು ಭಾಷೆ ಮಾತನಾಡುವ ವಿಶ್ವಕರ್ಮ ಸಮುದಾಯದ ಸುಮಾರು 22 ಸಾವಿರ ಮತದಾರರಿದ್ದು, ಅಭ್ಯರ್ಥಿಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಸಂಖ್ಯಾಬಲ ನಮ್ಮ ಬಳಿ ಇದೆ ಎಂದು ಶ್ರೀ ವಿಶ್ವಕರ್ಮ ಸಮುದಾಯ ಜಾಗೃತ ಸೇವಾ ಟ್ರಸ್ಟ್ ನ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಶ್ವಕರ್ಮ ಸಮುದಾಯವನ್ನು ಎಲ್ಲಾ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ ಎಂದು ಆರೋಪಿಸಿದ್ದಾರೆ.
ಯಾವುದೇ ಸರ್ಕಾರ ಬಂದರೂ ವಿಶ್ವಕರ್ಮ ಜನರು ಸೌಲಭ್ಯ ವಂಚಿತರಾಗುತ್ತಲೇ ಇದ್ದಾರೆ. ವಿಶ್ವಕರ್ಮ ಅಭಿವೃದ್ಧಿ ಮಂಡಳಿಯನ್ನು ಕೇವಲ ಕಣ್ಣೊರೆಸುವ ತಂತ್ರವಾಗಿ ಆರಂಭಿಸಲಾಗಿದ್ದು, ವರ್ಷಕ್ಕೆ 11 ಲಕ್ಷದಿಂದ 15 ಲಕ್ಷ ರೂ.ವರೆಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಇಷ್ಟು ಹಣದಿಂದ ಬಡವರ ಉದ್ಧಾರ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಸ್ವಂತ ಮನೆ ಇಲ್ಲದ ವಿಶ್ವಕರ್ಮ ಸಮುದಾಯದ ಶೇ.90 ರಷ್ಟು ಮಂದಿ ಬಾಡಿಗೆ ಮನೆಗಳನ್ನೇ ಅವಲಂಬಿಸಿದ್ದಾರೆ. ಕುಲಕಸುಬು ಕೂಡ ಸಮರ್ಪಕವಾಗಿ ದೊರೆಯುತ್ತಿಲ್ಲ. ಕೂಲಿ ಕೆಲಸಗಳನ್ನು ಮಾಡಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಆದರೆ ಸರ್ಕಾರ ಮಾತ್ರ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿರುವ ಹರೀಶ್ ಜಿ.ಆಚಾರ್ಯ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಗಳಲ್ಲಿ ನಮ್ಮ ಪ್ರತಿನಿಧಿಗಳು ಇರುವ ಅವಶ್ಯಕತೆ ಇದೆ. ಆದ್ದರಿಂದ ಚುನಾವಣಾ ಕಣದಲ್ಲಿ ಗುರುತಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಸರ್ಕಾರ ಶೈಕ್ಷಣಿಕ ಮತ್ತು ಆರ್ಥಿಕ ಸಬಲತೆಗಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ವಿಶ್ವಕರ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ತಲುಪುತ್ತಿಲ್ಲ. ನಮ್ಮ ಸಮುದಾಯದವರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಒಬ್ಬ ರಾಜಕಾರಣಿಯನ್ನು ಗೆಲ್ಲಿಸಲು ಆಗದಿದ್ದರು ಸೋಲಿಸುವಷ್ಟು ಮತಶಕ್ತಿ ನಮ್ಮ ಸಮುದಾಯದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವಕರ್ಮ ಸಮುದಾಯದಲ್ಲಿ ಸದಸ್ಯತ್ವ ಪಡೆದುಕೊಳ್ಳುವವರು 9164857163 ನ್ನು ಸಂಪರ್ಕಿಸಬಹುದು. ಸ್ವಂತ ನಿವೇಶನ ಅಥವಾ ಮನೆ ಇಲ್ಲದವರು ನಮ್ಮ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊAಡು ಅರ್ಜಿ ಸಲ್ಲಿಸಿದಲ್ಲಿ ಎಲ್ಲಾ ಮಾಹಿತಿಗಳೊಂದಿಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗುವುದು ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.










