ಮಡಿಕೇರಿ ಫೆ.24 : ಜಾತ್ಯತೀತ ಮುಖವಾಡದ ಕಾಂಗ್ರೆಸ್ ಪಕ್ಷ ವಿರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಟಿಕೆಟ್ ನೀಡಿದರೆ ಜಾತ್ಯತೀತ ಜನತಾದಳ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಸೂಚಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಲೆ ಬರುತ್ತಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡದೆ ವಂಚಿಸುತ್ತಲೇ ಬರುತ್ತಿದೆ. ಆದರು ನಮ್ಮದು ‘ಜಾತ್ಯತೀತ’ ಸಿದ್ಧಾಂತದ ಪಕ್ಷ ಎಂದು ಹೇಳಿಕೊಳ್ಳುತ್ತಿದೆ. ನಿಜವಾದ ಜಾತ್ಯತೀತ ಮನೋಭಾವ ಕಾಂಗ್ರೆಸ್ಸಿಗಿದ್ದರೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡಲಿ ಎಂದು ಸವಾಲೆಸೆದರು.
ಒಂದು ವೇಳೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದೆ. ಪ್ರತಿ ಚುನಾವಣಾ ಹಂತದಲ್ಲಿ ಜೆಡಿಎಸ್ ಸ್ಪರ್ಧೆ ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ 45 ಸಾವಿರಕ್ಕು ಹೆಚ್ಚಿನ ಮುಸ್ಲಿಂ ಬಾಂಧವರಿದ್ದು, ಈ ಬಾರಿ ಅಲ್ಪಸಂಖ್ಯಾತರಿಗೆ ಸ್ಪರ್ಧೆಗೆ ಅವಕಾಶ ನೀಡಿ ಕಾಂಗ್ರೆಸ್ ನ್ನು ಗೆಲ್ಲಿಸಲಿ ಎಂದರು.
ವಿರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಮೂಲಕ ಸ್ಪರ್ಧಿಸಲು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಈಗಾಗಲೇ ವರಿಷ್ಠರಿಗೆ ಮನವಿ ಮಾಡಿರುವುದಾಗಿ ಗಣೇಶ್ ಹೇಳಿದರು.
::: ಆಕಾಂಕ್ಷಿಗಳು :::
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ತಲಾ ನಾಲ್ವರು ಆಕಾಂಕ್ಷಿಗಳಿದ್ದಾರೆ. ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಗೆಲುವಿಗೆ ಶ್ರಮಿಸಲಾಗುವುದು. ಈಗಾಗಲೇ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂದು ಪ್ರತಿಬಿಂಬಿಸಿಕೊಳ್ಳುತ್ತಿರುವ ನಾಪಂಡ ಮುತ್ತಪ್ಪ ಅವರಿಗೆ ಟಿಕೆಟ್ ನೀಡಿದರು ಅವರನ್ನು ಬೆಂಬಲಿಸುವುದಾಗಿ ತಿಳಿಸಿದ ಗಣೇಶ್, ಪಕ್ಷದೊಳಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲವೆಂದು ಸ್ಪಷ್ಟಪಡಿಸಿದರು.
ಮಡಿಕೇರಿ ಕ್ಷೇತ್ರದಲ್ಲಿ ಇಸಾಕ್ ಖಾನ್, ಬಿ.ಬಿ.ಪುಷ್ಪಾವತಿ, ವಿಠಲ್ ಗೌಡ, ನಾಪಂಡ ಮುತ್ತಪ್ಪ ಅವರುಗಳು ಆಕಾಂಕ್ಷಿಗಳಾಗಿದ್ದಾರೆ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಮನ್ಸೂರ್ ಅಲಿ, ಬಲ್ಲಚಂಡ ಗೌತಮ್, ಯೂಸುಫ್ ಕೊಂಡಂಗೇರಿ ಹಾಗೂ ಮಂಜುನಾಥ್ ಅವರು ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದದಾರೆ.
ಇಲ್ಲಿಯವರೆಗೂ ಪಕ್ಷದ ವರಿಷ್ಠರು ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಹೀಗಿದ್ದೂ ತಾವೇ ಅಭ್ಯರ್ಥಿಯೆಂದು ಪ್ರಚಾರದಲ್ಲಿ ತೊಡಗಿರುವವರು ಟಿಕೆಟ್ ದೊರಕದಿದ್ದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ರೀತಿ ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರೇ ಆಗಿರಲಿ ಅವರನ್ನು ಅಮಾನತುಗೊಳಿಸಲಾಗುವುದು ಎಂದರು.
::: ಮನೆ ಮನೆಗೆ ಕುಮಾರಣ್ಣ :::
ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೈಗೊಂಡ ಜನಪರ ಕಾರ್ಯಗಳನ್ನು ಮನೆ ಮನೆಗೆ ತಿಳಿಸುವ ಸಲುವಾಗಿ ಕೊಡಗು ಜಿಲ್ಲೆಯಲ್ಲಿ “ಮನೆ ಮನೆಗೆ ಕುಮಾರಣ್ಣ” ಕಾರ್ಯಕ್ರಮವನ್ನು ಫೆ.27 ರಿಂದ ನಡೆಸಲಾಗುವುದು. ಅತಿವೃಷ್ಟಿ ಸಂದರ್ಭ ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ್ದ ಕುಮಾರಣ್ಣ, ರೈತರ ಸಾಲಮನ್ನಾದಂತಹ ಗಮನಾರ್ಹ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದರು. ಇದನ್ನು ಕೊಡಗಿನ ಜನ ಮರೆತಿಲ್ಲ ಎಂದು ಗಣೇಶ್ ಹೇಳಿದರು.
::: ಜೆಡಿಎಸ್ ತೊರೆಯಲ್ಲ :::
ಕಳೆದ ಮೂರೂವರೆ ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಪಕ್ಷ ಸಂಘಟನೆಯನ್ನು ಸಹಿಸದ ಕೆಲವರು ತಾನು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕು ಪಕ್ಷ ಬಿಡುವುದಿಲ್ಲ, ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಚಿಂತನೆಯಡಿ ಎಲ್ಲರೂ ಕಾರ್ಯಕರ್ತರಂತೆ ಶ್ರಮವಹಿಸಿ ಜೆಡಿಎಸ್ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ತೊರೆದಿರುವ ಸಂಕೇತ್ ಪೂವಯ್ಯ ಅವರು ಬಿಜೆಪಿಯನ್ನು ಮಣಿಸಲು ಜಾತ್ಯತೀತರೆಲ್ಲ ಒಂದಾಗಿರಬೇಕೆನ್ನುವ ಕಾರಣದಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವುದಾಗಿ ಕಾರಣ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ನಿಜವಾದ ಜಾತ್ಯತೀತತೆ ಇದ್ದರೆ ವಿರಾಜಪೇಟೆಯಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟರು ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿ ಅದನ್ನು ಸಾಬೀತುಪಡಿಸಲಿ. ಸಂಕೇತ್ ಅವರ ನಿರ್ಗಮನ ಬೇಸರ ತಂದಿದೆ, ಜೆಡಿಎಸ್ ಪಕ್ಷ ಅವರಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿ ನಾಯಕತ್ವವನ್ನು ತುಂಬಿತ್ತು ಎಂದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಸಂಕೇತ್ ಪೂವಯ್ಯ ಅವರು ಚುನಾವಣೆಗೆ ನಿಂತಾಗ ಅಲ್ಪಸಂಖ್ಯಾತ ಸಮೂಹ ತಮ್ಮ ಪೂರ್ಣ ಬೆಂಬಲವನ್ನು ನೀಡಿದ್ದರು. ಇದೀಗ ಜೆಡಿಎಸ್ ನಲ್ಲಿ ಅಲ್ಪಸಂಖ್ಯಾತರಿಗೆ ಸ್ಪರ್ಧೆಗೆ ಅವಕಾಶ ದೊರಕುವ ಸಂದರ್ಭ ಬೆಂಬಲಿಸಬೇಕಿದ್ದ ಸಂಕೇತ್ ಅವರು, ಪಕ್ಷ ತೊರೆದು ಅಲ್ಪಸಂಖ್ಯಾತರ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ, ಜಿಲ್ಲಾ ಉಪಾಧ್ಯಕ್ಷ ಬಲ್ಲಚಂಡ ಗೌತಮ್, ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಬಿ.ಪುಷ್ಪಾವತಿ ಉಪಸ್ಥಿತರಿದ್ದರು.