Advertisement
3:25 AM Friday 8-December 2023

ಜೆಡಿಎಸ್ ತೊರೆಯಲ್ಲ : ಕೆ.ಎಂ.ಗಣೇಶ್ ಸ್ಪಷ್ಟನೆ

24/02/2023

ಮಡಿಕೇರಿ ಫೆ.24 : ಕಳೆದ ಮೂರೂವರೆ ವರ್ಷಗಳಿಂದ ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿದ್ದೇನೆ. ಪಕ್ಷ ಸಂಘಟನೆಯನ್ನು ಸಹಿಸದ ಕೆಲವರು ತಾನು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕು ಪಕ್ಷ ಬಿಡುವುದಿಲ್ಲ, ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಚಿಂತನೆಯಡಿ ಎಲ್ಲರೂ ಕಾರ್ಯಕರ್ತರಂತೆ ಶ್ರಮವಹಿಸಿ ಜೆಡಿಎಸ್ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತೊರೆದಿರುವ ಸಂಕೇತ್ ಪೂವಯ್ಯ ಅವರು ಬಿಜೆಪಿಯನ್ನು ಮಣಿಸಲು ಜಾತ್ಯತೀತರೆಲ್ಲ ಒಂದಾಗಿರಬೇಕೆನ್ನುವ ಕಾರಣದಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವುದಾಗಿ ಕಾರಣ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ನಿಜವಾದ ಜಾತ್ಯತೀತತೆ ಇದ್ದರೆ ವಿರಾಜಪೇಟೆಯಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟರು ಅಥವಾ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿ ಅದನ್ನು ಸಾಬೀತುಪಡಿಸಲಿ. ಸಂಕೇತ್ ಅವರ ನಿರ್ಗಮನ ಬೇಸರ ತಂದಿದೆ, ಜೆಡಿಎಸ್ ಪಕ್ಷ ಅವರಿಗೆ ಎಲ್ಲಾ ಸ್ಥಾನಮಾನಗಳನ್ನು ನೀಡಿ ನಾಯಕತ್ವವನ್ನು ತುಂಬಿತ್ತು ಎಂದರು.