ಮಡಿಕೇರಿ ಫೆ.24 : ಕೊಡಗು ಪೊಲೀಸರ ವಿಶೇಷ ತಂಡ ದಾಳಿ ನಡೆಸಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 8 ಮಂದಿ ಪ್ರಮುಖ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿದ್ದು 5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಕೊಡಗು ಸೇರಿದಂತೆ ನೆರೆಯ ಕೇರಳ ರಾಜ್ಯಕ್ಕೂ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಾದಿಕ್(33), ಖಲೀಲ್(37), ದರ್ಶನ್(27), ಇಲಿಯಾಸ್(44) ಹಾಗೂ ಮಡಿಕೇರಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕರಣ್ ಕುಮಾರ್(27), ಗಗನ್(26), ನಿರುಪ್(27) ಹಾಗೂ ವಿನಯ್ ಎಂಬವರನ್ನು ಬಂಧಿಸಿರುವುದಾಗಿ ಎಸ್.ಪಿ. ರಾಮರಾಜನ್ ತಿಳಿಸಿದರು. 2 ಪ್ರಕರಣಗಳಲ್ಲಿ ಒಟ್ಟು 5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ಮಡಿಕೇರಿಯಲ್ಲಿ ಬಂಧಿತರಾದ ಆರೋಪಿಗಳು ಮೈಸೂರು ಮಂಡಿಮೊಹಲ್ಲಾದಿAದ ಗಾಂಜಾ ಖರೀದಿ ಮಾಡಿದ್ದು, ಬೈಕ್‌ಗಳ ಮೂಲಕ ಮಾರಾಟ ಮಾಡುತ್ತಿದ್ದರು.
::: ಒಡಿಸ್ಸಾದಿಂದ ಆಮದು :::
ವಿರಾಜಪೇಟೆಯಲ್ಲಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದಂತೆ ಒಡಿಸ್ಸಾದಿಂದ ರೈಲಿನ ಮೂಲಕ ಗಾಂಜಾ ಆಮದು ಮಾಡಿರುವುದು ಪತ್ತೆಯಾಗಿದೆ. ಒಡಿಸ್ಸಾ ಮೂಲದ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಿ ಬಳಿಕ ರೈಲುಗಳ ಮೂಲಕ ಗಾಂಜಾ ಆಮದು ಮಾಡಿಕೊಳ್ಳುತ್ತಿದ್ದರು. ಸ್ವಲ್ಪ ಪ್ರಮಾಣದ ಗಾಂಜಾವನ್ನು ಮಾರಾಟ ಮಾಡಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.
ಕಳೆದ 20 ದಿನಗಳ ಅವಧಿಯಲ್ಲಿ ಜಿಲ್ಲೆಯೆ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 5 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಗಾಂಜಾ ಮಾರಾಟದ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಎಸ್.ಪಿ. ಸುಂದರ್ ರಾಜ್ ಉಪಸ್ಥಿತರಿದ್ದರು.













