ನಾಪೋಕ್ಲು ಫೆ.27 : ಗ್ರಾಮೀಣ ಭಾಗದಲ್ಲಿ ಕ್ಯಾಟರ್ ಬಿಲ್ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಕ್ರೀಡೆಗೆ ಮತ್ತೆ ಜೀವ ತುಂಬ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಕಕ್ಕಬೆಯ ಪ್ರೌಢಶಾಲಾ ಮೈದಾನದಲ್ಲಿ ಸ್ಟೆಪ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಕ್ಯಾಟರ್ ಬಿಲ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಕ್ರೀಡೆಯ ತವರೂರು. ಕ್ರೀಡೆ ಇಲ್ಲಿನ ಜನರ ಸಂಸ್ಕೃತಿಯಾಗಿದ್ದು, ಗ್ರಾಮೀಣ ಕ್ರೀಡೆಯೊಂದಕ್ಕೆ ಹೊಸತನ ನೀಡುವ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕ್ಯಾಟರ್ ಬಿಲ್ ಸ್ಪರ್ಧೆಯ ಮೂಲಕ ಉತ್ತಮ ಗುರಿ ಸಾಧಿಸಲು ಸಾಧ್ಯ. ಕೊಡಗಿನಲ್ಲಿ ಹಾಕಿ ಉತ್ಸವ ಆರಂಭಗೊಂಡ ಬಳಿಕ ವಿವಿಧ ಗ್ರಾಮೀಣ ಕ್ರೀಡೆಗಳು ಕ್ರೀಡಾಸಕ್ತರಿಗೆ ರಸದೌತಣ ನೀಡುತ್ತಿವೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸೌಹಾರ್ದತೆಯನ್ನು ಮೆರೆಯಬೇಕು ಎಂದರು.
ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದ ಅಪ್ಪಣ್ಣ ಮಾತನಾಡಿ, ಗುರಿ ಇದ್ದಾಗ ಯಶಸ್ಸು ಪಡೆಯಲು ಸಾಧ್ಯ ಗ್ರಾಮೀಣ ಭಾಗಗಳಲ್ಲಿ ವಿವಿಧ ಕ್ರೀಡೆಗಳು ಜನಪ್ರಿಯವಾಗುತ್ತಿವೆ. ಗ್ರಾಮೀಣ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಸಾಮರ್ಥ್ಯ ಹಾಗೂ ಧೈರ್ಯ ವೃದ್ಧಿಸುತ್ತದೆ. ಇಂತಹ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಮುಂದಿನ ತಯಾರಿಗೆ ಬುನಾದಿಯಾಗುತ್ತದೆ ಎಂದರು.
ಕಿಡ್ನಿ ದಾನಿ ಕಲಿಯಂಡ ಮಿಲನ ಮಂದಣ್ಣ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ ಸಮಾಜದಲ್ಲಿ ನಾವು ಇತರರಿಗೆ ನೆರವು ನೀಡುವುದು ಅವಶ್ಯಕ.ದೇಹದ ಅಂಗಗಳನ್ನು ದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಯುವಜನರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು .ದಾನ ಮಾಡುವುದರಿಂದ ಇತರರಿಗೂ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಟೆಪ್ಸ್ ಸಂಸ್ಥೆಯ ಆಯೋಜಕ ಬೊಳಿಯಾಡಿರ ಸಂತು ಸುಬ್ರಮಣಿ ಪ್ರಸ್ತಾವಿಕವಾಗಿ ಮಾತನಾಡಿ ದೇಶಿಯ ಕ್ರೀಡೆಯಾದ ಕ್ಯಾಟರ್ ಬಿಲ್ ಸ್ಪರ್ಧೆಯಲ್ಲಿ ಕ್ಯಾಟರ್ ಬಿಲ್ ಅನ್ನು ಬೇಟೆ ರೀತಿಯಲ್ಲಿ ಬಳಸದೆ ಜಾಗೃತಿ ಮೂಡಿಸುವುದರೊಂದಿಗೆ ಗುರಿ ಇಡುವ ಸ್ಪರ್ಧೆಯಾಗಿ ಜನಪ್ರಿಯಗೊಳಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಕಿಡ್ನಿ ದಾನ ಮಾಡಿದ ಕಲಿಯಂಡ ಮಿಲನ ಮಂದಣ್ಣ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸಾಲು ಓದಿಸಿ ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು .
ಕಕ್ಕಬ್ಬೆ ವಿಎಸ್ಎಸ್ ಎನ್ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಡಿಕೇರಿ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ರ‍್ಯಾಲಿ ಪಟು ಮಾಲೇಟಿರ ಜಗತ್ ನಂಜಪ್ಪ, ಆರ್ ಎಂ ಸಿ ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ , ಕಕ್ಕಬ್ಬೆ ಗ್ರಾ.ಪಂ ಮಾಜಿ ಅಧ್ಯಕ್ಷ ಕಲಿಯಂಡ ಸುನಂದ, ಡಾಕ್ಟರ್ ಮಂಜಣ್ಣ ಮೈಸೂರಿನ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂಡಿರ ಜಗದೀಶ್ ,ಕುಂಜಿಲ ಪೈನರಿ ಜಮಾಯತ್ ಮಾಜಿ ಅಧ್ಯಕ್ಷ ಸೌಕತ್ ಆಲಿ, ಕಕ್ಕಬ್ಬೆ ವಿಎಸ್ಎಸ್ ಏನ್ ಉಪಾಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ, ರಾಷ್ಟ್ರೀಯ ಕ್ರೀಡಾಪಟು ಕೋಟೆರ ಮುದ್ದು ಮತ್ತಿತರರು ಪಾಲ್ಗೊಂಡಿದ್ದರು.
ಕೋಡಿಮಣಿಯಂಡ ತಮ್ಮುಣಿ ಬೋಪಯ್ಯ ಪಾರ್ಥಿಸಿ ಅಂಜಪರವಂಡ ಕುಶಾಲಪ್ಪ ಸ್ವಾಗತಿಸಿದರು.ಕುಲ್ಲೇಟಿರ ಅರುಣ್ ಬೇಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಾಜ್ಯಮಟ್ಟದ ಮುಕ್ತ ಸ್ಪರ್ಧೆಯಲ್ಲಿ 18 ವರ್ಷದ ಒಳಗಿನ ಒಂದು ವಿಭಾಗ ಹಾಗೂ 18 ವರ್ಷ ಮೇಲ್ಪಟ್ಟವರ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸ್ಪರ್ಧಿಗಳು ನಿಗದಿತ ಟಾರ್ಗೆಟ್ ಗೆ 25 ಮೀಟರ್ ಅಂತರದಲ್ಲಿ ಸ್ಪರ್ಧಿಗಳು ಗುರಿ ಇಟ್ಟರು.
ವಿಜೇತರರು : 18 ವರ್ಷದ ಒಳಗಿನ ವಿಭಾಗದಲ್ಲಿ : ವಿಘ್ನೇಶ್ ಪ್ರಥಮ ಸ್ಥಾನ ಪಡೆದಿದ್ದು, ರೂ.5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಕೋಡಿಮಣಿಯಂಡ ನಾಣಯ್ಯ ತಮ್ಮದಾಗಿಸಿಕೊಂಡಿದ್ದು, ರೂ.3 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ಅಲ್ಲರಂಡ ಧನುಷ್ ತೃತೀಯಸ್ಥಾನ ಪಡೆದುಕೊಂಡಿದ್ದು, ರೂ.2 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು.
18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ : ತಮಿಳುನಾಡಿನ ಶೇಖರ್ ಪ್ರಥಮ ಬಹುಮಾನ ಪಡೆದುಕೊಂಡಿದ್ದು, ರೂ.5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಮರ0ದೋಡ ಗ್ರಾಮದ ಪೂವಣ್ಣ ದ್ವಿತೀಯ ಸ್ಥಾನ ಪಡೆದುಕೊಂಡು ರೂ.3 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು.
ತೃತೀಯ ಬಹುಮಾನ ಪಡೆದುಕೊಂಡ ಕಾನಂಡ ಸಜ್ಜನ್ ಪೂವಯ್ಯ ಅವರಿಗೆ ರೂ.2 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ಸಮಾರೋಪ ಸಮಾರಂಭ : ಸಂಜೆ ಜರುಗಿದ ಸಮರೋಪ ಸಮಾರಂಭದಲ್ಲಿ ಸ್ಟೆಪ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಯೋಜಕ ಬೊಳಿಯಾಡಿರ ಸಂತು ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದುರು. ಈ ಕಾರ್ಯಕ್ರಮದಲ್ಲಿ ಟ್ರೋಫಿ ದಾನಿಗಳಾದ ಪೊನ್ನೋಳ್ತಂಡ ಅಶೋಕ್ ನಂಜಪ್ಪ, ಕಲ್ಯಾಟಂಡ ಸಚಿನ್ ಭೀಮಯ್ಯ, ಮೇಚಂಡ ಜಯ ಜೋಯಪ್ಪ , ಕರೋಟಿರ ಚರ್ಮನ, ಸೇರಿದಂತೆ ಇತರರು ಉಪಸ್ಥಿತರಿದ್ದು ವಿಜೇತರರಿಗೆ ಬಹುಮಾನ ಮತ್ತು ನಗದು ನೀಡಿ ಗೌರವಿಸಿದರು.
ವರದಿ : ದುಗ್ಗಳ ಸದಾನಂದ.