ನಾಪೋಕ್ಲು ಡಿ.25 NEWS DESK : ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಪೆರಾಜೆ, ಪೆರಾಜೆ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ಮತ್ತೆ ಗ್ರಾಮ ಗೌಡ ಸಮಿತಿ ಪೆರಾಜೆ ಸಂಯುಕ್ತ ಆಶ್ರಯದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅರೆಭಾಷೆ ಕೂಡ್ಕಟ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪೆರಾಜೆ ಊರು ಅರೆಭಾಷೆಯ ತವರೂರು ಎಂದ ಅವರು ಅರೆಭಾಷೆ ಜನಾಂಗದಲ್ಲಿರುವ ವಿಶಿಷ್ಟ ಆಚಾರ-ವಿಚಾರ ಪದ್ಧತಿ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಅವನತಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅರೆಭಾಷೆ ಮಾತನಾಡುವ ಎಲ್ಲರದ್ದಾಗಿದೆ ಎಂದರು. ಆ ದಿಸೆಯಲ್ಲಿ ಸ್ಪಷ್ಟವಾದ ಗುರಿ ಮತ್ತು ದೃಷ್ಟಿ ಇದ್ದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯ. ಪೆರಾಜೆ ಗ್ರಾಮದಿಂದ ಹಲವರು ಅರೆಭಾಷೆಗೆ ಅತ್ಯುತ್ತಮ ಕೊಡಗೆ ನೀಡಿದ್ದಾರೆ ಎಂದು ಅವರು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರೆಭಾಷೆಯ ಆದಿಕವಿ ಎಂದೇ ಗುರುತಿಸಿಕೊಂಡಿರುವ ಭವಾನಿಶಂಕರ ಹೊದ್ದೆಟ್ಟಿ ಅವರು ಮಾತನಾಡಿ, ಅರೆಭಾಷೆ ಸಾಹಿತ್ಯ ನಡೆದು ಬಂದ ದಾರಿ ವಿವರಿಸಿ, ಅರೆಭಾಷೆಯಲ್ಲಿ ಬರೆಯುವ ಅಭ್ಯಾಸವನ್ನೂ ಮಕ್ಕಳಲ್ಲಿ ಬೆಳೆಸುವ ಜವಾಬ್ಧಾರಿ ಅರೆಭಾಷೆ ಮಾತನಾಡುವ ಎಲ್ಲರ ಮೇಲಿದೆ ಎಂದು ನುಡಿದರು. ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ ಬಾಲಚಂದ್ರ ಬಳ್ಳಡ್ಕ, ಪೆರಾಜೆ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಭವಾನಿ ಕೊಳಂಗಾಯ, ಪೆರಾಜೆ ಗ್ರಾಮ ಗೌಡ ಸಮಿತಿ ಅಧ್ಯಕ್ಷರಾದ ಕೆ.ಕೆ. ಪದ್ಮಯ್ಯ ಹಾಗೂ ಮನು ಪೆರುಮುಂಡ ಇದ್ದರು. ಅರೆಭಾಷೆ ಕೂಡ್ಕಟ್ಟ್ – 2025 ಕಾರ್ಯಕ್ರಮದ ಪ್ರಯುಕ್ತ ನಡೆದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲಕರಾಗಿ ಭಾಗವಹಿಸಿದ ಲೋಕೇಶ್ ಕುಂಚಡ್ಕ ‘ಅರೆಭಾಷೆ ಇಂದು ಮತ್ತು ನಾಳೆ’ ಎಂಬ ವಿಷಯದ ಬಗ್ಗೆ ಹಾಗೂ ಸಂಜೀವ ಕುದ್ಪಾಜೆ ಅವರು ‘ಅರೆಭಾಷೆರಲ್ಲಿ ಬದಲಾದ ಮದುವೆ ಕ್ರಮಗ’ ವಿಷಯಗಳ ಕುರಿತು ಮಾತನಾಡಿದರು. ನಂತರದಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. ಸೋಬಾನೆ, ಜೋಗುಳ ಪದ, ಅಜ್ಜಿಕತೆ, ಅರೆಭಾಷೆ ಕವನ ರಚನೆ ಕುರಿತ ಸ್ಫರ್ಧೆಗಳನ್ನು ನಡೆಸಲಾಯಿತು. :: ಸಮಾರೋಪ :: ಸಮಾರೋಪ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಶ್ರೀಶಾಸ್ತಾವು ದೇವಸ್ಥಾನ ಪೆರಾಜೆಯ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಸಂಪಾಜೆ ಹೋಬಳಿಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಚಿದಾನಂದ ಪೀಚೆಮನೆ, ಅಕಾಡೆಮಿ ಮಾಜಿ ಸದಸ್ಯರಾದ ಸಂಗೀತಾ ರವಿರಾಜ್, ಪೆರಾಜೆಯ ಚಿಗುರು ಯುವಕ ಮಂಡಲದ ಅಧ್ಯಕ್ಷರಾದ ರಮೇಶ್ ಮಜಿಕೋಡಿ, ಸಂಜೀವಿನಿ ಒಕ್ಕೂಟದ ಸದಸ್ಯೆ ಕನಕಾಂಬಿಕ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಸಂಚಾಲಕರಾದ ಗೋಪಾಲ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು. ಡಾ. ಜ್ಞಾನೇಶ್ ಎನ್.ಎ ಸ್ವಾಗತಿಸಿ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ ನಿರೂಪಿಸಿದರು. ಸಂಜೀವಿನಿ ಒಕ್ಕೂಟದ ಶಿಲಾ ಚಿದಾನಂದ ನಿಡ್ಯಮಲೆ ಧನ್ಯವಾದ ಸಮರ್ಪಿಸಿದರು.
ವರದಿ : ದುಗ್ಗಳ ಸದಾನಂದ.











