ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ನಡುವೆ ಇರುವ ಶಿಶಿಲ ಎಂಬ ಪುಟ್ಟ ಹಳ್ಳಿಯಲ್ಲಿದೆ ಈ ಪ್ರಸಿದ್ಧ ಮತ್ಸ್ಯತೀರ್ಥ ಕ್ಷೇತ್ರ.
ಸುಂದರ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ನಡುವೆ ಪಸರಿಸಿದ ತುಳುನಾಡು ಸಾವಿರಾರು ದೈವ ದೇವತೆಗಳ ಪುಣ್ಯದ ನೆಲೆವೀಡು.ಇಲ್ಲಿ ಪೂಜಿಸಲ್ಪಡುವ ನೂರಾರು ದೈವ ದೇವಸ್ಥಾನ ಗಳಲ್ಲಿ ಬಹು ಪುರಾತನ ದಿಂದಲೂ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನವೂ ಒಂದು.ಊರಿನ ಹೆಸರಿನೊಂದಿಗೆ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ ಮೇಲಿರುವ ಶಿಲಾಮಯ ಶಿಶಿಲೇಶ್ವರ ದೇವಾಲಯ ಪಕ್ಕದಲ್ಲಿದೆ ನದಿಯಿಂದಾಶ್ರಯಿಸಿದ ಮನಮೋಹಕ ಮತ್ಸ್ಯತೀರ್ಥ. ಇದು ಇಲ್ಲಿಯ ದೃಶ್ಯ ವೈಶಿಷ್ಟ್ಯ.
ಕಪಿಲಾ ತಟದಲ್ಲಿರುವ ಶಿಶಿಲೇಶ್ವರ ಕ್ಷೇತ್ರದಲ್ಲಿ ಮೀನುಗಳ ಸಮೃದ್ಧವಾದ ಸಾಮ್ರಾಜ್ಯವೇ ಇದೆ. ಶಿಶಿಲೇಶ್ವರ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಈ ಮೀನುಗಳಿಗೆ ಆಹಾರವನ್ನು ನೀಡಿದರೆ ಮನುಷ್ಯನ ದೇಹಕ್ಕೆ ಅಂಟಿರುವ ಚರ್ಮರೋಗ ಸೇರಿದಂತೆ ಇತರೇ ವ್ಯಾಧಿಗಳು ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಶಿಶಿಲೇಶ್ವರ ದೇವಸ್ಥಾನ ಶುಭ್ರವಾಗಿ ಹರಿಯುವ ಕಪಿಲಾ ನದಿಯ ತಟದಲ್ಲಿದೆ. ಘಟ್ಟ ಪ್ರದೇಶಗಳಿಂದ ಹರಿಯುವ ಈ ನದಿಯಲ್ಲಿ ನೀರಿನ ಜೊತೆಗೆ ಹೆಚ್ಚಿನ ಪ್ರಮಾಣದ ಮೀನುಗಳೂ ಹರಿದುಬರುತ್ತದೆ. ಈ ಮೀನುಗಳಲ್ಲಿ ಹೆಚ್ಚಿನ ಮೀನುಗಳು ಇದೇ ಶಿಶಿಲೇಶ್ವರ ದೇವಸ್ಥಾನದ ತದಿ ತಟದಲ್ಲೇ ಬೀಡು ಬಿಟ್ಟಿವೆ. ದೇವಸ್ಥಾನಕ್ಕೆ ಬಂದ ಭಕ್ತ ಈ ಮೀನುಗಳ ದರ್ಶನ ಮಾಡದೆ ತೆರಳೋದೂ ಬಲು ವಿರಳ ಎನ್ನುವ ಮಟ್ಟಿಗೆ ಇಲ್ಲಿ ಮೀನಿಗೆ ಪ್ರಾಮುಖ್ಯತೆಯಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 30ಞm ಹಾಗೂ ಕುಕ್ಕೆಯಿಂದ 45 ಞm ದೂರದಲ್ಲಿದೆ ಶಿಶಿಲ. ದೇವಾಲಯದ ಸುತ್ತಲೂ ಗುಡ್ಡಗಳ ಸಾಲು ಕಣ್ಣಿಗೆ ಮುದ ನೀಡುತ್ತವೆ. ಒಟ್ಟಾರೆಯಾಗಿ ಪ್ರಕೃತಿಯೇ ಮೈವೆತ್ತಿ ನಿಂತಂತಹ ಪ್ರದೇಶ ಶಿಶಿಲ. ಶಿಶಿಲೇಶ್ವರ ದೇವಾಲಯದ ಎಡಬದಿಯಲ್ಲಿ ಪ್ರವಹಿಸುತ್ತಿರುವ ಕಪಿಲಾ ನದಿಯಲ್ಲಿ ಪೆರುವೇಲು ಮೀನುಗಳ ಮತ್ಸ್ಯ ತೀರ್ಥವಿದೆ. ಈ ಬ್ರಹದಾಕಾರದ ಮನಮೋಹಕ ಮತ್ಸ್ಯ ಸಂಕುಲವು ಈ ಭಾಗದ ನೀರನ್ನು ಶುದ್ದಗೊಳಿಸುವುದರಿಂದ ಇಲ್ಲಿಗೆ ಮತ್ಸ್ಯತೀರ್ಥ ವೆಂಬ ಹೆಸರಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಈ ದೇವಾಲಯದಲ್ಲಿ ಬಾವಿ ಇರುವುದಿಲ್ಲ.ಈ ಮತ್ಸ್ಯತೀರ್ಥವನ್ನೇ ದೇವರಿಗೆ ಅಭಿಷೇಕ ಮಾಡುವುದು ಇಲ್ಲಿಯ ವೈಶಿಷ್ಟ್ಯ.
ವಿ. ಸೂ : ನೀವು ತೆರಳುವ ಯಾವುದೇ ಪ್ರವಾಸಿ ಸ್ಥಳ ಅಥಾವ ಪುಣ್ಯ ಕ್ಷೇತ್ರಗಳ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಸ ಎಸೆದು ಬೇಜವಾಬ್ದಾರಿ ಮೆರೆಯಬೇಡಿ. ಕಸವನ್ನು ಕಸದ ಬುಟ್ಟಿಗೆ ಹಾಕಿ, ಪ್ರಕೃತಿಯ ಸೌಂದರ್ಯವನ್ನು ಕಾಪಾಡಿ.
ಕೃಪೆ : ನಮ್ಮ ಸುಬ್ರಹ್ಮಣ್ಯ