ಮಡಿಕೇರಿ ಫೆ.27 : ಸವಿತಾ ಸಮಾಜವು ಅತ್ಯಂತ ಶ್ರೀಮಂತ ಪರಂಪರೆ ಹೊಂದಿದ್ದು, ಆ ನಿಟ್ಟಿನಲ್ಲಿ ಸವಿತಾ ಮಹರ್ಷಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಶ್ರೀ ಸವಿತಾ ಮಹರ್ಷಿ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಸವಿತಾ ಮಹರ್ಷಿಯು ರಥಸಪ್ತಮಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಸವಿತಾ ಸಮಾಜವು ಸಮಾಜದಲ್ಲಿ ವಿಶಿಷ್ಟ ಇತಿಹಾಸ ಹೊಂದಿದೆ. ಶಿವನ ದಿವ್ಯದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಅವರು ಪುರಾಣ ಗ್ರಂಥದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ ಎಂದು ಶಾಸಕರು ಹೇಳಿದರು.
ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ, ಸವಿತಾ ಮಹರ್ಷಿ ಅವರು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಯನ್ನು ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಬೆಳಕು ತೋರಿಸಿದೆ. ಸವಿತಾ ಸಮಾಜದ ಬದುಕು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ದೊರೇಶ ಅವರು ಮಾತನಾಡಿ ಅಪಾರ ಜ್ಞಾನ ಭಂಡಾರ ಹೊಂದಿದ್ದ ಸವಿತಾ ಮಹರ್ಷಿ ಅವರು ನಾಲ್ಕನೇ ವೇದವಾದ ಸಾಮವೇದ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿ ದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದರು.
ತಾಲ್ಲೂಕು ಸವಿತಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಮಧು ಚೆಟ್ಟಿಮಾನಿ, ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷರಾದ ಶಿವಾಜಿ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಮಧು ಎಂ.ಟಿ.,(ಮಡಿಕೇರಿ), ಶಿವಣ್ಣ(ಸೋಮವಾರಪೇಟೆ), ಜಗದೀಶ ಭಂಡಾರಿ (ಕುಶಾಲನಗರ), ದೇವರಾಜ್(ವಿರಾಜಪೇಟೆ), ಮಹಿಳಾ ಘಟಕದ ಅಧ್ಯಕ್ಷರಾದ ವಸಂತಿ ಆರ್.ಬಿ., ತಾ. ಸವಿತಾ ಸಮಾಜದ ನಗರಾಧ್ಯಕ್ಷರಾದ ಟಿ.ಜಿ.ಸಂದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಇತರರು ಇದ್ದರು.
ಅವಿನಾಶ್ ಬೊಟ್ಲಪ್ಪ ನಿರೂಪಿಸಿದರು. ಜೆಸಿಕಾ ಮತ್ತು ಸ್ಪರ್ಶ ಪ್ರಾರ್ಥಿಸಿದರು. ಮಣಜೂರು ಮಂಜುನಾಥ್ ಸ್ವಾಗತಿಸಿ, ವಂದಿಸಿದರು.










