
ಮಡಿಕೇರಿ NEWS DESK ಫೆ.17 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕೆ.ಎಸ್.ಆರ್.ಟಿ.ಸಿ.ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್, ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಫೆ.19 ರಂದು ಹಮ್ಮಿಕೊಂಡಿರುವ ‘ಸಾರಿಗೆ ನೌಕರರ ಬೆಂಗಳೂರು ಚಲೋ’ ಹೋರಾಟಕ್ಕೆ ಯುನೈಟೆಡ್ ಪ್ಲಾಂಟೇಷನ್ ವಕರ‍್ಸ್ ಯೂನಿಯನ್ (ಎಐಟಿಯುಸಿ) ಕೊಡಗು ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ‘ಬೆಂಗಳೂರು ಚಲೋ’ ಹೋರಾಟದಲ್ಲಿ ಕೊಡಗು ಜಿಲ್ಲೆಯ ಸಾರಿಗೆ ನೌಕರರು ಕೂಡ ಪಾಲ್ಗೊಳ್ಳುತ್ತಿದ್ದು, ನೌಕರರ ಬೇಡಿಕೆಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಜಂಟಿ ಕ್ರಿಯಾ ಸಮಿತಿ ವತಿಯಿಂದ ಜ.29ರಂದು ‘ಬೆಂಗಳೂರು ಚಲೋ’ ಹೋರಾಟಕ್ಕೆ ಕರೆ ನೀಡಲಾಗಿತ್ತು. ಆದರೆ ಹಿರಿಯ ಕಾರ್ಮಿಕ ಮುಖಂಡ ಹೆಚ್.ವಿ.ಅನಂತ ಸುಬ್ಬರಾವ್ ರವರ ಹಠಾತ್ ನಿಧನದಿಂದಾಗಿ ಹೋರಾಟವನ್ನು ಮುಂದೂಡಲಾಗಿತ್ತು. ಸರಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಇಲ್ಲಿಯವರೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವ ಕಾರಣ ನಾಲ್ಕು ಸಾರಿಗೆ ನಿಗಮಗಳ ಸಾವಿರಾರು ನೌಕರರು ಹೋರಾಟ ನಡೆಸಲು ಮುಂದಾಗಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಹೋರಾಟಕ್ಕೆ ಕೊಡಗು ಜಿಲ್ಲಾ ಎಐಟಿಯುಸಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೆಚ್.ಎಂ.ಸೋಮಪ್ಪ ಹೇಳಿದ್ದಾರೆ.









