
ಮಡಿಕೇರಿ ಫೆ.17 : ರಾಜ್ಯದ ಕಾಂಗ್ರೆಸ್ ನೇತೃತ್ವದ ಆಡಳಿತ ಕೇವಲ ಪ್ರಚಾರಕಷ್ಟೇ ಸೀಮಿತವಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೊಡಗಿನಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರ ಹಾಗೂ ಶಾಸಕರು ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಗರಣಗಳಲ್ಲಿ ಮುಳುಗಿರುವ ಸರಕಾರದ ಬಣ್ಣವನ್ನು ಇತ್ತೀಚೆಗೆ ಗುತ್ತಿಗೆದಾರರ ಸಂಘ ಬಯಲು ಮಾಡಿದ್ದು, ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿರುವ ಕುರಿತು ಆರೋಪ ಮಾಡಿದೆ. ಪೂರ್ಣಗೊಂಡ ಕಾಮಗಾರಿಗಳ ಹಣವನ್ನು ಗುತ್ತಿಗೆದಾರರಿಗೆ ನೀಡಲಾಗದೆ ಪರದಾಡುತ್ತಿರುವ ಸರಕಾರ ಅಭಿವೃದ್ಧಿ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಟೀಕಿಸಿದ್ದಾರೆ. ಕೊಡಗು ಜಿಲ್ಲೆಯ ಜನ ಬದಲಾವಣೆ ಬಯಸಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕರು ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವ ಅಭಿವೃದ್ಧಿಯೂ ಕಣ್ಣ ಮುಂದೆ ಕಾಣುತ್ತಿಲ್ಲ, 100 ಮೀಟರ್ ರಸ್ತೆ ಮಾಡಿ 100 ಕಿ.ಮೀ ರಸ್ತೆ ನಿರ್ಮಾಣ ಮಾಡಿದಷ್ಟು ಪ್ರಚಾರ ಗಿಟ್ಟಿಸಿಕೊಳ್ಳಲಾಗುತ್ತಿದೆ. ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ರಾಜಾರೋಷವಾಗಿ ನಡೆಯುತ್ತಿದೆ, ಅರ್ಜಿ ವಿಲೇವಾರಿಯಾಗುತ್ತಿಲ್ಲವೆಂದು ಜನ ಅಳಲು ತೋಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ, ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಹಲವು ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಕಳಪೆ ಕಾಮಗಾರಿ ಭ್ರಷ್ಟಾಚಾರದ ಒಂದು ಭಾಗವಾಗಿದೆ ಎಂದು ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರೈತರಿಗೆ ಬೆಳೆನಷ್ಟ ಪರಿಹಾರ ದೊರೆತ್ತಿಲ್ಲ. ವನ್ಯಜೀವಿಗಳ ದಾಳಿಯನ್ನು ತಡೆಯಲು ಶಾಶ್ವತ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ರೈತರ ಸಮಸ್ಯೆಗಳಿಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸಿಗರು ತಾವು ನಡೆದಿದ್ದೇ ದಾರಿ, ತಮ್ಮನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವ ಮನೋಭಾವದಲ್ಲಿದ್ದಾರೆ. ಆಡಳಿತದ ವೈಫಲ್ಯತೆಯ ಬಗ್ಗೆ ವಿರೋಧ ಪಕ್ಷ ಪ್ರಶ್ನಿಸಿದರೆ ಇವರ ಬಳಿ ಸಮರ್ಪಕವಾದ ಯಾವ ಉತ್ತರ ಇಲ್ಲದಾಗಿದೆ. ಜಮ್ಮಾಬಾಣೆ ವಿಚಾರದಲ್ಲೂ ಸಮಸ್ಯೆ ಪರಿಹಾರ ಆಗಿಹೋಯ್ತು ಎಂದು ಪ್ರಚಾರ ಗಿಟ್ಟಿಸಿಕೊಂಡರೆ ಹೊರತು ಜನರಿಗೆ ಮಾತ್ರ ಪೂರ್ಣ ಪ್ರಮಾಣದ ಪ್ರಯೋಜನವಾಗಿಲ್ಲ. ಜಮ್ಮಾಬಾಣೆ ಪರಿಹಾರದ ಕುರಿತು ದಾಖಲೆ ಸಹಿತ ನಾನು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದವರು ಈಗ ಯಾಕೆ ಚರ್ಚೆಗೆ ಬರುತ್ತಿಲ್ಲ. ಮಾಜಿ ಶಾಸಕರುಗಳು ಚರ್ಚೆಗೆ ಬರುವುದಾಗಿ ಸವಾಲನ್ನು ಸ್ವೀಕರಿಸಿದ್ದರೂ ಹಾಲಿ ಶಾಸಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ, ಜಮ್ಮಾಬಾಣೆ ಸಮಸ್ಯೆಗೆ ಸಂಬಂಧಿಸಿದಂತೆ ಬಹಿರಂಗ ಚರ್ಚಗೆ ಬರಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿ ಜನರ ಹಾದಿ ತಪ್ಪಿಸುವುದನ್ನು ನಿಲ್ಲಿಸಲಿ ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.








