ಚೆಟ್ಟಳ್ಳಿ ಫೆ.28 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಪ್ರಯೋಜನಕಾರಿಯಾಗಿದೆ ಎಂದು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆಟ್ಟಳ್ಳಿಯ ವಿಶ್ವಗುರು ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ನಬಾರ್ಡ್ ಪ್ರಾಯೋಜಿತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಕಾರ್ಯಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳಲ್ಲಿ ರೈತರಿಗೆ ಶೇ.40 ರಷ್ಟು ಆರ್ ಟಿಸಿಯಿಂದ ಸಾಲ ಸೌಲಭ್ಯ ಪಡೆಯುತ್ತಿದ್ದು, ಸರಕಾರದ ಸೌಲಭ್ಯಗಳನ್ನು ಪಡೆಯಲು ತೀವ್ರ ತೊಂದರೆಯಾಗುತ್ತಿದೆ ಎಂದರು.
ಜಾಗದಾಖಲೆ ಸರಿಪಡಿಸಲು ರೈತರಿಂದ ಪ್ರತೀ ಏಕರೆಗೆ 25 ಸಾವಿರ ಲಂಚ ಪಡೆಯುತ್ತಿರುವುದು ವಿಷಾದನೀಯ ಎಂದ ಅವರು, ಬ್ಯಾಂಕ್ ವ್ಯವಹಾರದಲ್ಲಿ ಡಿಜಿಟಲೀಕರಣದಿಂದ ಅನುಕೂಲವಾಗಿದೆ ಜೊತೆಗೆ ಸರಕಾರದ ಸೌಲಭ್ಯಗಳು ದುರುಪಯೋಗವಾಗಲು ಸಾಧ್ಯವಿಲ್ಲ. ಎಲ್ಲರು ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಸ್ಮಿತಾ ಮಾತನಾಡಿ, ಬ್ಯಾಂಕ್ ವ್ಯವಹಾರಗಳ ಡಿಜಿಟಲೀಕರಣದಿಂದಾಗಿ ಮೊಬೈಲ್ ಬ್ಯಾಂಕ್ , ನೆಟ್ ಬ್ಯಾಂಕ್, ಎಟಿಎಂ ಬಳಕೆ ಯಾಗುತ್ತಿದ್ದು, ಎಲ್ಲರು ಬ್ಯಾಂಕ್ ವ್ಯವಹಾರವನ್ನು ಬಿಟ್ಟು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುವಂತಾಗಬೇಕು. ಸಹಕಾರಿ ಸಂಘಗಳು ಹಲವು ವಿವಿಧ ಬಗೆಯ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಮಹಿಳೆಯರು ಹೆಚ್ಚಾಗಿ ಆರ್ಥಿಕತೆಯಲ್ಲಿ ಸುಧಾರಿಸಿಕೊಳ್ಳಲು ಅನುಕೂಲಕರವಾಗಿದೆ. ಸರಕಾರ ವಿವಿಧ ವಿಮಾಯೋಜನೆಗಳ ಸವಲತ್ತನ್ನು ಪಡೆದುಕೊಳ್ಳಬೇಕು. ಸ್ವ ಉದ್ಯೋಗದ ಜೊತೆ ಉಳಿತಾಯದ ಮನೋಭಾವನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ಬೆಳೆಸಬೇಕೆಂದು ತಿಳಿಸಿದರು.
ಜಿಲ್ಲಾ ಸಹಾಕಾರ ಕೇಂದ್ರ ಬ್ಯಾಂಕಿನ ಮಾರ್ಕೇಟಿಂಕ್ ಎಕ್ಸಿಕ್ಯುಟಿವ್ ನಂಜಪ್ಪ ಮಾತನಾಡಿ, ತಮಗೆ ಬರುವ ಆದಾಯದಲ್ಲಿ ಉಳಿತಾಯ ಮಾಡಿಕೊಂಡು ಆರ್ಥಿಕ ಸಮತೋಲವನ್ನು ಕಾಯ್ದುಕೊಳ್ಳುವ ಬಗ್ಗೆ ತಿಳಿಸುವುದೇ ಆರ್ಥಿಕ ಸಾಕ್ಷರತೆ. ಬ್ಯಾಂಕ್ ವ್ಯವಹರಿಸುವ ಪ್ರತೀಯೊಬ್ಬನು ಕೆವೈಸಿ ಮಾಡಿಸಿ ಕೊಳ್ಳಲೇಬೇಕು. ಮಕ್ಕಳಿಗೆ ಸಹಕಾರ ಸಂಘಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಬ್ಯಾಂಕ್ ವ್ಯವಹಾರದ ಜೊತೆ ಉಳಿತಾಯ ಮನೋಭಾವವನ್ನು ಬೆಳೆಸಬೇಕು ಸಲಹೆ ನೀಡಿದರು.
ಡಿಜಿಟಲ್ ಬ್ಯಾಂಕ್ ವ್ಯವಸ್ಥೆ ಬಂದ ನಂತರ ಹ್ಯಾಂಡ್ರೋಯ್ಡ್ ಫೋನ್ ಗಳ ಮೂಲಕ ಬೆರಳ ತುದಿಯಲ್ಲೇ ಹಣದ ವ್ಯವಹಾರ ನಡೆಸಬಹುದಾಗಿದೆ. ಉಳಿತಾಯಕ್ಕೆ ಒತ್ತು ಕೊಡುವ ಮೂಲಕ ದೇಶದ ಆರ್ಥಿಕತೆಯ ಸಾಕ್ಷರತೆಗೆ ಪ್ರಯೋಜನಕಾರಿಯಾಗಬೇಕೆಂದು ತಿಳಿಸಿದರು.
ಸಹಕಾರ ಸಂಘದ ಸವಲತ್ತು, ಯೋಜನೆಗಳು ಹಾಗೂ ಎಫ್ಐಡಿ ತಂತ್ರಾಂಶದ ಜಾಗದ ದಾಖಲೆಯ ಬಗ್ಗೆ ಜಿಲ್ಲಾ ಬ್ಯಾಂಕಿನ ಆರ್ಥಿಕ ಪ್ರತಿನಿಧಿ ಜ್ಯೋತಿ ಹಾಗೂ ಸಂಘದ ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ.ರಮೇಶ್ ತಿಳಿಸಿದರು.
ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಸಿಬ್ಬಂದಿ ಪೊನ್ನಪ್ಪ, ಮಾಜಿ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪ್ಪಯ್ಯ, ಮಾಜಿ ವ್ಯವಸ್ಥಾಪಕಿ ಮುಳ್ಳಂಡ ಮಾಯಮ್ಮ, ಸಹಕಾರ ಸಂಘದ ನಿರ್ದೇಶಕರುಗಳು, ಶ್ರೀಶಕ್ತಿ ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ನಂದಿನಿ ನಿರೂಪಿಸಿ, ವಂದಿಸಿದರು.