ಸಿದ್ದಾಪುರ ಫೆ.28 : ಆಟೋ ಚಾಲಕರು ಮತ್ತು ಮಾಲೀಕರು ಸಾರ್ವಜನಿಕ ವಲಯದಲ್ಲಿ ಬದುಕು ಕಂಡುಕೊಳ್ಳಲು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಸಿದ್ದಾಪುರ ಗ್ರಾ.ಪಂ ಅಧ್ಯಕ್ಷರಾದ ತಿತಮಾಡ ರೀನಾ ತುಳಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ವತಿಯಿಂದ ಸಿದ್ದಾಪುರದ ಮೈಸೂರು ರಸ್ತೆಯ ಸಂಘ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆಟೋ ಚಾಲಕರು ಸ್ನೇಹಜೀವಿಗಳು, ಕಡು ಬಡವರು, ಮಧ್ಯಮ ಕುಟುಂಬ ವರ್ಗಕ್ಕೆ ಬಡವನ ತೇರು. ಬದುಕನ್ನು ರೂಪಿಸಿಕೊಳ್ಳಲು ಸಮಾಜದ ಮುಖ್ಯವಾಹಿನಿಗೆ ಬಂದವರು. ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತನೆ ಮಾಡಬೇಕು. ಆರ್ಥಿಕವಾಗಿ ಸಫಲತೆ ಹೊಂದಬೇಕು. ಕುಟುಂಬ ನಿರ್ವಹಣೆ ಕಷ್ಟ ಸಾದ್ಯವಾದರು. ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಧರನ್ ಮಾತನಾಡಿ, ಚಾಲಕರು ಸಂಘಟನೆಯಲ್ಲಿ ತೊಡಗಬೇಕು. ಚಾಲನೆಯಲ್ಲಿರುವ ಆಟೋಗಳಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಹೊಂದಿಕೊಂಡು ತೆರಳಬೇಕು. ಇಲಾಖೆಯಿಂದ ವಿನಾ ಕಾರಣ ಸಂಕಷ್ಟಕ್ಕೆ ಒಳಗಾಗದಿರಿ. ಸಂಘದ ಚಾಲಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಮುಂದಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶಕ್ತಿ ದಿನಪತ್ರಿಕೆಯ ಸಿದ್ದಾಪುರ ಭಾಗದ ವರದಿಗಾರ ವಾಸು ಆಚಾರ್ಯ , ಪೋಲಿಸ್ ಠಾಣೆಯ ಅನುಪಸ್ಥಿತಿಯಲ್ಲಿ ಸಹಾಯಕ ಠಾಣಾಧಿಕಾರಿ ಮೋಹನ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಸದಸ್ಯರಾಗಿದ್ದು, ಅಕಾಲಿಕ ಮರಣಕ್ಕೆ ತುತ್ತಾದ ಮಂಜು ಮತ್ತು ಸಿದ್ದಿಕ್ ಅವರಿಗೆ ಒಂದು ನಿಮಿಷಗಳ ಕಾಲ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಗೌ.ಅಧ್ಯಕ್ಷ ಪವಿತ್ರನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಪ್ರದಾನ ಕಾರ್ಯದರ್ಶಿಗಳಾದ ಗಿರೀಶ್ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ಶಶಿಧರನ್ ಅವರು ನಿರೂಪಣೆ ಮಾಡಿದರು.
ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಚಾಲಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.