ಮಡಿಕೇರಿ ಮಾ.1 : ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ ಬಜೆಟ್ ನಲ್ಲಿ ವಿಶೇಷ ಚೇತನರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ವಿಕಲಚೇತನರ ಸಂಘ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ನಿರ್ದೇಶಕಿ ಎಂ.ಎನ್.ವೀಣಾ ಬಜೆಟ್ ನಲ್ಲಿ ವಿಶೇಷ ಚೇತನರ ಪರವಾದ ಯಾವುದೇ ನಿಲುವುಗಳನ್ನು ತೆಗೆದುಕೊಂಡಿಲ್ಲ. ನಮ್ಮ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲವೆಂದು ತಿಳಿಸಿದರು.
ವಿಶೇಷ ಚೇತನರ ಮಾಸಿಕ ಪೋಷಣಾ ಭತ್ಯೆಯನ್ನು ರೂ.3 ಸಾವಿರಕ್ಕೆ ಹೆಚ್ಚಿಸಬೇಕು, ಗೌರವ ಧನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ, ಪಟ್ಟಣ, ತಾಲೂಕು, ಪುರ್ನವಸತಿ ಕಾರ್ಯಕರ್ತರುಗಳನ್ನು ಕ್ರಮವಾಗಿ ಗ್ರಾ.ಪಂ, ನಗರ, ತಾಲೂಕು ವಿಶೇಷ ಚೇತನರ ಅಧಿಕಾರಿಯಾಗಿ ಪರಿವರ್ತಿಸಬೇಕು, ಗೌರವಧನವನ್ನು ಕನಿಷ್ಠ ವೇತನವಾಗಿ ಪರಿವರ್ತಿಸಬೇಕು, ಗ್ರಾ.ಪಂ ಹಾಗೂ ಇತರ ಇಲಾಖೆಗಳಲ್ಲಿ ವಿಶೇಷ ಚೇತನರಿಗೆ ಮೀಸಲಿರುವ 5ರ ನಿಧಿಯನ್ನು ವೈಯಕ್ತಿಕವಾಗಿ ನೀಡುವಂತಾಗಬೇಕು, ಲೈನ್ ಮನೆಯಲ್ಲಿ ವಾಸಿಸುತ್ತಿರುವ ವಿಶೇಷ ಚೇತನರ ಕುಟುಂಬಗಳಿಗೆ ವಿಶೇಷ ಆದ್ಯತೆಯ ಮೇಲೆ ಮನೆ ಒದಗಿಸಬೇಕು, ರಾಜ್ಯಾದ್ಯಂತ ಸರಕಾರಿ ಬಸ್‍ಗಳಲ್ಲಿ ಸಂಚರಿಸಲು ಉಚಿತ ಪಾಸ್ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಜೆ.ಎ.ಮಹೇಶ್ವರ ಮಾತನಾಡಿ, ಮೂರ್ನಾಡಿನ ಚಿಗುರು ವಿಕಲಚೇತನರ ಸ್ವ-ಸಹಾಯ ಗುಂಪಿನ ಪರಿಶ್ರಮದಿಂದ 2011ರಂದು ಅಸ್ತಿತ್ವಕ್ಕೆ ಬಂದ ಜಿಲ್ಲಾ ವಿಕಲಚೇತನರ ಸಂಘವು 2012ರಲ್ಲಿ ನೋಂದಣಿಯಾಗಿದ್ದು, ವಿಶೇಷ ಚೇತನರಿಗಾಗಿ ದುಡಿದ ಕೊಡಗಿನ ಏಕೈಕ ಸಂಘವಾಗಿದೆ ಎಂದರು.
ಸಂಘದ ಚಟುವಟಿಕೆಗಳಿಗಾಗಿ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಪ್ರಸ್ತುತ ನಗರಸಭಾ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ಸಂಘದ ಚಟುವಟಿಕೆ ನಡೆಸುತ್ತಾ ಬರಲಾಗುತ್ತಿದೆ.
ಆದರೆ ಕೆಲವು ವ್ಯಕ್ತಿಗಳು ದಿವ್ಯಾಂಗರ ಒಕ್ಕೂಟವನ್ನು ರಚಿಸಿಕೊಂಡು, ಸಂಘದ ಕಚೇರಿಗೆ ಬೀಗ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕೆ.ಪಿ.ರೇವಣ್ಣ, ಎಂ.ಕೆ.ಬಾಷಾ, ವಿಕಲಚೇತನರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ತಿರುಮಲೇಶ್ವರ ಹಾಗೂ ಕಾರ್ಯನಿರ್ವಣಾಧಿಕಾರಿ ಕೆ.ಎಂ.ಹಸನ್ ಉಪಸ್ಥಿತರಿದ್ದರು.