ನಾಪೋಕ್ಲು ಮಾ.1 : ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವವು ಮಾ.3 ರಿಂದ ಮಾ.5ರ ವರೆಗೆ ಜರುಗಲಿದೆ.
ಸುಮಾರು 300 ವರ್ಷಗಳ ನಂತರ 50ಲಕ್ಷ ರೂ.ವೆಚ್ಚದಲ್ಲಿ ಅದ್ಧೂರಿ ಮಹೋತ್ಸವ ಜರುಗಲಿದ್ದು, ಈ ದೈವತಾ ಕಾರ್ಯದಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವಿಧ ಸಮಿತಿಗಳ ಆಶಯವಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀಶಾಸ್ತಾವು ದೇವಸ್ಥಾನದಿಂದ ಮಾ.3ರಂದು ಬೆಳಿಗ್ಗೆ 7.30ಕ್ಕೆ ಹಸಿರು ವಾಣಿ ಮೆರವಣಿಗೆ ಹೊರಡಲಿದೆ. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಲಿದೆ.
11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದ್ದು, ಸಂಜೆ 5 ಗಂಟೆಯಿಂದ ದೈವಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ದೈವಗಳ ಕೂಡುವಿಕೆ, ಶ್ರೀಪೊಟ್ಟನ್ ದೈವ ಕಾರ್ಯಕ್ರಮ ನಡೆಯಲಿದೆ.
ಮಾ.4 ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಕೊರತಿಯಮ್ಮ ದೈವ, 8.30 ರಿಂದ ಚಾಮುಂಡಿ ದೈವ, 9.30 ರಿಂದ ಶ್ರೀ ವಿಷ್ಣುಮೂರ್ತಿ ದೈವ, 12ರಿಂದ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 3 ಗಂಟೆಯಿಂದ ಶ್ರೀಕಾರ್ನೋನ್ ದೈವದ ವೆಳ್ಳಾಟಂ, 5 ರಿಂದ ಶ್ರೀ ಕೊರಚನ್ ದೈವದ ವೆಳ್ಳಾಟಂ, 7 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಲಾಟಂ, ಲಾಟ ವಿಷ್ಣುಮೂರ್ತಿ ದೈವಗದ ಆರಂಭ ವೈ ನಾಟ್ ಕುಲವನ್ ದೈವದ ವೆಳ್ಳಾಟಂ, ರಾತ್ರಿ12.30 ರಿಂದ ಶ್ರೀವಿಷ್ಣುಮೂರ್ತಿದೈವದ ಕೋಲ ಆರಂಭವಾಗಲಿದೆ. 1 ಗಂಟೆಯಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಲಾಟಂ ನಡೆಯಲಿದೆ.
ಮಾ.5 ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಕಾರ್ನೋನ್ ದೈವ, 9 ರಿಂದ ಶ್ರೀ ಕೋರಚ್ಚನ್ ದೈವ, 11 ರಿಂದ ಶ್ರೀ ಕಂಡನಾರ್ ಕೇಳನ್ ದೈವ, 2 ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಲಿದೆ.
ಇತಿಹಾಸ : ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶ ಶಕ್ತಿಯ ವಿವಿಧ ಅವತಾರ ಶಕ್ತಿಯನ್ನು, ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದ್ದು, ಅವುಗಳಲ್ಲಿ ವಯನಾಟ್ ಕುಲವನ್ ಸಹ ಒಂದು. ಚೈತನ್ಯ ಮೂರ್ತಿ ಶ್ರೀ ಪರಮಶಿವನ ಅಂಶಾವತಾರದ ಆದಿ ದಿವ್ಯನಾಗಿ ಶ್ರೀ ವಯನಾಟ್ ಕುಲವನ್ ಭೂಮಿಯಲ್ಲಿ ಅವತರಿಸಿ, ವೈನಾಡಿನಲ್ಲಿ ನೆಲೆಸಿದರು. ವೈನಾಡಿನ ರಕ್ಷಕನಾಗಿ ಶೈವಾಂಶ ಸಂಭೂತನಾದ ಶ್ರೀ ವಯನಾಟ್ ಕುಲವನ್ ಬೇಟೆಗಾರ ದೈವವೆಂದು ಕರೆಯಲ್ಪಡುತ್ತಿದೆ. ಮಲೆನಾಡಿಗೆ ಪ್ರವೇಶಿಸಿ ಶ್ರೀ ತೊಂಡಚ್ಚನ್ ಎಂದು ಕರೆಯಲ್ಪಟ್ಟು ಅನೇಕ ಪ್ರದೇಶಗಳಲ್ಲಿ ಸಂಚರಿಸಿ ತುಳುನಾಡಿಗೆ ಆಗಮಿಸಿ ಅಲ್ಲಲ್ಲಿ ನೆಲೆ ಐತಿಹ್ಯವಿದೆ.
ಆದಿಪರಂಬು ಕಣ್ಣನ ಆತಿಥ್ಯ ಮತ್ತು ಭಕ್ತಿಗೆ ಮೆಚ್ಚಿ ತನ್ನೊಡನೆ ಲೀನಗೊಳಿಸಿ ತೀಯರ ಕಾರ್ನವನನ್ನಾಗಿ ಸಂಭೋದಿಸಿ ಗೌರವಿಸಲಾಯಿತು. ಭಾಗಮಂಡಲ ಸೀಮೆಯ ಪೆರಾಜೆ ಶ್ರೀ ಶಾಸ್ತವು ಕ್ಷೇತ್ರ ಪರಿಧಿಯ ಕುಂಬಳಚೇರಿಯಲ್ಲಿ ನೆಲೆನಿಂತಿರುವುದಾಗಿ ಹೇಳಲಾಗಿದೆ.
ಮಾ.3 ರಂದು ಧಾರ್ಮಿಕ ಸಭೆ : ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೀಡಲಿದ್ದಾರೆ.
ಶಾಸಕ ಕೆ.ಜಿ.ಬೋಪಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಸಚಿವ ಅಂಗಾರ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ರವಿ ಕಾಳಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ,ವಯನಾಟ್ ಕುಲವನ್ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕುಂಞಕಣ್ಣ ಬೇಡಗಂತೊಡಿಕಾನದ ಶ್ರೀಮಲ್ಲಿಕಾರ್ಜುನ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಉಪಸ್ಥಿತರಿರುವರು ಎಂದು ದೇವಾಲಯದ ವಿವಿಧ ಸಮಿತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದೆ.
ವರದಿ : ದುಗ್ಗಳ ಸದಾನಂದ







