ಮಡಿಕೇರಿ ಮಾ.3 : ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಭಾಷಿಕ ಜನಾಂಗದವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿರುವ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಕೆ.ಎಂ.ಸರ ಚಂಗಪ್ಪ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲಾ ಜಾತಿ ಜನಾಂಗದವರು ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರತಿಯೊಂದು ಜನಾಂಗಕ್ಕೂ ತಮ್ಮ ಹಕ್ಕನ್ನು ಪಡೆಯುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಕೊಡವ ಭಾಷಿಕ ಜನಾಂಗ ತನ್ನ ಹಕ್ಕನ್ನು ಪಡೆಯಲು ನಾಚಪ್ಪ ಅವರ ಅಪ್ಪಣೆ ಪಡೆಯಬೇಕಾಗಿಲ್ಲ ಎಂದರು.
ಕೊಡವ ಭಾಷಿಕರ ಕುಲಶಾಸ್ತ್ರ ಅಧ್ಯಯನಕ್ಕಾಗಿ 2020 ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮ ಇದೀಗ ಸ್ಪಂದನೆ ದೊರೆತ್ತಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವರು ಕುಲಶಾಸ್ತ್ರ ಅಧ್ಯಯನಕ್ಕಾಗಿ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರುವ ನಾಚಪ್ಪ ಅವರು ಕೊಡವ ಭಾಷಿಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ, ಅವರ ಹಕ್ಕನ್ನು ಅವರು ಮಂಡಿಸಿದ್ದಾರೆ, ನಮ್ಮ ಹಕ್ಕನ್ನು ನಾವು ಕೇಳಿದ್ದೇವೆ ಎಂದು ತಿಳಿಸಿದರು.
ಕೊಡವ ಭಾಷಿಕ ಮೂಲನಿವಾಸಿಗಳು ಶ್ರೀಮಂತ ಕೊಡವ ಸಂಸ್ಕೃತಿಯ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಕೊಡಗಿನ ಮಂದ್, ಮಾನಿ, ದೇವಾಸ್ಥಾನಗಳಲ್ಲಿ ಸ್ಥಾನಮಾನಗಳನ್ನು ವಹಿಸಿಕೊಂಡು ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಯ ಪಾಲುದಾರಾರಾಗಿದ್ದಾರೆ. ಆದರೆ ನಾಚಪ್ಪ ಅವರು ಕೊಡವ ಭಾಷಿಕ ಮೂಲ ನಿವಾಸಿಗಳನ್ನು ಟೀಕಿಸುವ ಭರದಲ್ಲಿ ಹುಲಿ, ಕಾಡು ಬೆಕ್ಕು ಪದ ಬಳಕೆಯ ಮೂಲಕ ಹೋಲಿಕೆ ಮಾಡಿದ್ದು, ಇದು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವಾಗಿದೆ. ಅಲ್ಲದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎನ್‍ಸಿ ಸಂಘಟನೆಯ ಮೂಲಕ ಜನಾಂಗ ಜನಾಂಗಗಳ ನಡುವೆ ಒಡಕು ಮೂಡಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಕಾರ್ಯದಲ್ಲಿ ನಾಚಪ್ಪ ತೊಡಗಿದ್ದಾರೆ ಎಂದು ಆರೋಪಿಸಿರುವ ಸರ ಚಂಗಪ್ಪ, ಸರ್ಕಾರ ತಕ್ಷಣ ಸಂಘಟನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ ಮಾತನಾಡಿ ಕೊಡವರಲ್ಲದ ಪ್ರಭಾವಿ ರಾಜಕಾರಣಿಗಳಿಗೆ ಪೀಚೆ ಕತ್ತಿ, ಒಡಿ ಕತ್ತಿ ನೀಡಿ ಮೆರವಣಿಗೆ ಮಾಡುವಾಗ ನಾಚಪ್ಪ ಅವರ ಕೊಡವ ಸಂಸ್ಕೃತಿ ಮೇಲಿನ ಅಭಿಮಾನ ಮತ್ತು ಸ್ವಾಭಿಮಾನ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.
ಸಮಾಜವನ್ನು ಒಡೆದು ಅಶಾಂತಿ ಮೂಡಿಸಿ ನಾಯಕರಾಗಬಾರದು, ಒಗ್ಗೂಡಿಸಿ ನಾಯಕರಾಗಬೇಕು. ನಾಚಪ್ಪ ಅವರು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ಸಂಘಟನೆಯ ಮೂಲಕ ತಮಗೆ ಬೇಕಾದ ಹಕ್ಕನ್ನು ಕೇಳಲಿ, ಅದು ಬಿಟ್ಟು ಕೊಡವ ಭಾಷಿಕರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ಮೂಲೆಗುಂಪಾಗಿದ್ದ ನಮಗೆ ಈಗ ಜಾಗೃತಿ ಮೂಡಿದೆ, ನಮ್ಮ ಹಕ್ಕನ್ನು ಪಡೆಯುವುದು ಹೇಗೆಂದು ತಿಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ ನಾಚಪ್ಪ ಅವರ ಬಗ್ಗೆ ಕೊಡವ ಸಮಾಜಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಕೊಡವ ಭಾಷಿಕ ಸಮುದಾಯಗಳ ಕೂಟದ ಉಪಾಧ್ಯಕ್ಷ ಪಿ.ಜಿ.ಅಯ್ಯಪ್ಪ ಮಾತನಾಡಿ ನಾಚಪ್ಪ ಅವರ ಹೇಳಿಕೆಯನ್ನು ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜೆ.ಎ.ಜೀವನ್ ಹಾಗೂ ಅರುಣ್ ಪೂವಯ್ಯ ಉಪಸ್ಥಿತರಿದ್ದರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*