ಗೋಣಿಕೊಪ್ಪಲು ಮಾ.4 : ‘ಕನ್ನಡ’ದ ಅರಿವನ್ನು ಹೊಂದದೆ ಈ ನಾಡಿನಲ್ಲಿ ಬದುಕಲು ಸಾಧ್ಯವಿಲ್ಲವೆಂಬ ವಾತಾವರಣವನ್ನು ನಾವು ಸೃಷ್ಟಿಸಿಕೊಳ್ಳಲು ಸಮರ್ಥರಾಗುವುದು ಅತ್ಯವಶ್ಯ, ಇವೆಲ್ಲವೂ ನಮ್ಮಿಂದಲೆ ಆರಂಭವಾಗಬೇಕೆಂಬ ಆಶಯವನ್ನು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ತೀತಿರ ರೇಖಾ ವಸಂತ್ ವ್ಯಕ್ತಪಡಿಸಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಡಾ. ಐ.ಮಾ.ಮುತ್ತಣ್ಣನವರ ಭವ್ಯ ವೇದಿಕೆಯಲ್ಲಿ ಆಯೋಜಿತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರಗಿನ ಜನ ಕೊಡಗಿನಲ್ಲಿ ಬಂದಿರುವುದು ಕೊಡಗಿನವರು ಹೊರಭಾಗಗಳಲ್ಲಿ ಇರಬೇಕಾಗುವ ಜಾಗತಿಕ ಅನಿವಾರ್ಯತೆಗಳನ್ನು ನಾವು ತಪ್ಪಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹೊರ ಊರಲ್ಲಿರುವವರು ಮಾತೃ ಸಂಸ್ಕೃತಿ ಯನ್ನು ಮರೆಯದಿರಬೇಕು. ಹೊರಗಿಂದ ಬಂದವರು ನಿಂತನೆಲದ, ಭಾಷೆ, ಸಂಸ್ಕೃತಿಯನ್ನು ಪ್ರೀತಿಸಬೇಕು, ಗೌರವಿಸಬೇಕೆಂದು ಅಭಿಪ್ರಾಯಿಸಿದರು.
ಇತರ ಭಾಷೆಗಳ ಉತ್ತ ಮಿಕೆಯನ್ನು ನಮ್ಮದಾಗಿಸಿಕೊಳ್ಳೋಣ-ನೆರೆಯವರ ತೋಟದ ಮಲ್ಲಿಗೆಯೂ ಕೂಡ ಪರಿಮಳವನ್ನೇ ಸೂಸುತ್ತದೆ ಎಂಬ ಭಾವದೊಂದಿಗೆ ಎಲ್ಲ ಭಾಷೆಗಳಲ್ಲೂ, ಸಾಹಿತ್ಯದಲ್ಲೂ ಇರುವ ಸೊಗಸನ್ನು, ಉತ್ತಮಿಕೆಯನ್ನು, ನಮ್ಮದಾಗಿಸಿಕೊಳ್ಳುವ ವಿಶಾಲ ಮನಸ್ಸು ನಮ್ಮೆಲ್ಲರದಾಗಬೇಕು. ನಮ್ಮ ಮಕ್ಕಳದ್ದಾಗಬೇಕು. ಈ ಎಲ್ಲಾ ಕಾರ್ಯಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸುವ ಕಾಮನಬಿ್ಲು ‘ಸಾಹಿತ್ಯ ಪರಿಷತ್ತು’ ಆಗಬೇಕು. ಜೊತೆಗೆ ಎಲ್ಲಾ ಭಾಷೆ ಅಕಾಡೆಮಿಗಳು, ಸಂಘ, ಸಂಸ್ಥೆಗಳು, ಸರ್ಕಾರ, ಮುಖ್ಯವಾಗಿ ವಿಶ್ವವಿದ್ಯಾನಿಲಯಗಳು ಕೈ ಜೋಡಿಸಬೇಕೆಂದು ತಿಳಿಸಿದರು.
ಆಧುನಿಕೋತ್ತರ ಕೊಡಗಿನ ದೂರದರ್ಶತ್ವದ ಕುರಿತು ಉತ್ಸಾಹಿ ಯುವ ಸಮುದಾಯಕ್ಕೆ ಕಾರ್ಯಾಗಾರಗಳು, ಗುಂಪು ಚರ್ಚೆಗಳನ್ನು ನಡೆಸಬೇಕು. ಬಹಳಷ್ಟು ಪ್ರಕಟವಾಗುವ ಪುಸ್ತಕಗಳು ಸಾಹಿತ್ಯ ವಲಯದಲ್ಲಿ ಚರ್ಚೆಗೆ, ವಿಮರ್ಶೆಗೆ ಒಳಗಾಗಬೇಕು. ಸಂಪಾದನೆಗೆ ಬೇಕಾದ ಶಿಕ್ಷಣ ಮಾತ್ರ ಮುಖ್ಯವಲ.್ಲ ಬದುಕಿನ ಸವಾಲುಗಳು-ಸೋಲುಗಳನ್ನು ಎದುರಿಸ ನಿಲ್ಲುವ ಆತ್ಮವಿಶ್ವಾಸವನ್ನು ಕೊಡುವ ಸಾಹಿತ್ಯ ಕೂಡ ಮುಖ್ಯವೆಂದು ಅಭಿಪ್ರಾಯಿಸಿದರು.
ಬಹುಭಾಷೆಗಳು ಈ ನಾಡಿನ ಸಂಪತ್ತು. ಸಾಹಿತ್ಯದಲ್ಲಿ ದೊಡ್ಡವರು-ಸಣ್ಣವರೆಂದು ಗುರುತಿಸುವುದಕ್ಕಿಂತ ಇಲ್ಲಿ ಯಾರೂ ಅಮುಖ್ಯರಲ್ಲ ಎಂಬುದು ಸೂಕ್ತವೆಂದು ತಿಳಿಸಿದರು.
ಉದ್ಘಾಟನೆ-ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕರಾದ ಕೆ. ಜಿ. ಬೋಪಯ್ಯ ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿ, ಈ ನೆಲದ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಪ್ರತಿಯೊಬ್ಬರು ಹೊಂದಬೇಕು. ಕನ್ನಡ ಭಾಷೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಕೆಲಸ ಕಾರ್ಯ ಇನ್ನು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದು ತಿಳಿಸಿದರು.
ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದೆ.ಕನ್ನಡ ಪರವಾದ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ನಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಧ್ವಜ ಹಸ್ತಾಂತರ-ಕಾರ್ಯಕ್ರಮದಲ್ಲಿ ಹಿಂದಿನ ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾದ ಗೀತಾ ಮಂದಣ್ಣ ಅವರು, ಇಂದಿನ ಸಮ್ಮೇಳನ ಅಧ್ಯಕ್ಷರಾದ ರೇಖಾ ವಸಂತ್ ರವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.
ಮೆರವಣಿಗೆ- ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಇಂದು ಬೆಳಗ್ಗೆ ಪಟ್ಟಣದ ಪಾಲಿಬೆಟ್ಟ ರಸ್ತೆಯ ವೃತ್ತದಲ್ಲಿ ಚಾಲನೆ ನೀಡಲಾಯಿತು. ಸಮ್ಮೇಳನಾಧ್ಯಕ್ಷರಾದ ತೀತಿರ ರೇಖಾ ವಸಂತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೇಶವ ಕಾಮತ್, ತಾಲ್ಲೂಕು ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಅವರನ್ನು ಒಳಗೊಂಡ ಅಲಂಕೃತ ವಾಹನದ ಮೆರವಣಿಗೆ, ವಿವಿಧ ಕಲಾ ತಂಡಗಳೊಂದಿಗೆ ನಡೆದು ಗಮನ ಸೆಳೆಯಿತು.
ಸಮ್ಮೇಳನದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಮನು ಬಳಿಗಾರ್, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪೊನ್ನಂಪೇಟೆ ತಾ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ ಮೊದಲಾದವರು ಪಾಲ್ಗೊಂಡಿದ್ದರು.











