ಮಡಿಕೇರಿ ಮಾ.6 : ಕೊಡಗು ಜಿ.ಪಂ, ವಿರಾಜಪೇಟೆ ತಾ.ಪಂ, ನಿಟ್ಟೂರು ಗ್ರಾ.ಪಂ ಮತ್ತು ಸಂಜೀವಿನಿ ಒಕ್ಕೂಟದ ವತಿಯಿಂದ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯ 14 ಸ್ತ್ರೀ ಶಕ್ತಿ ಸಂಘಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟ ಮೇಳ ನಡೆಯಿತು.
ನಿಟ್ಟೂರು ಗ್ರಾಮದ ಮೇಚಂಡ ಕಿಶು ಮಾಚಯ್ಯ ಅವರ ಗದ್ದೆಯಲ್ಲಿ ನಡೆದ ಮೇಳಕ್ಕೆ ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮೇಳವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ದೇಶದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತಂಬುಲು ಕರೆ ನೀಡಿದರು.
ಗ್ರಾ.ಪಂ ಸದಸ್ಯೆ ಪಡಿಞರಂಡ ಕವಿತಾ ಪ್ರಭು ಕುಮಾರ್ ಮಾತನಾಡಿ, ವಿವಿಧ ಮಳಿಗೆಗಳನ್ನು ನಮ್ಮ ಗ್ರಾಮದ ಮಹಿಳಾ ಸಂಘಟನೆಯ ಮಹಿಳೆಯರು ಅಚ್ಚುಕಟ್ಟಾಗಿ ಜೋಡಿಸಿ ತಾವು ಕೈ ತೋಟದಲ್ಲಿ ಬೆಳೆದ ತರಕಾರಿ ಮತ್ತು ತಾವೇ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಇಟ್ಟಿರುವುದು ಹೆಮ್ಮೆ ವಿಚಾರ. ಗ್ರಾಮಸ್ಥರು ವಿವಿಧ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳಾ ಸಂಘಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಗ್ರಾ.ಪಂ ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಅಭಿವೃದ್ಧಿ ಅಧಿಕಾರಿ ಮನಮೋಹನ್, NRML ಸಂಜೀವಿನಿ ಒಕ್ಕೂಟದ ತಾಲ್ಲೂಕು ಸಂಯೋಜಕ ಯೋಗೇಶ್, ಸಂಜೀವಿನಿ ಒಕ್ಕೂಟದ ಗ್ರಾಮ ಸಂಯೋಜಕರಾದ ಭವ್ಯ ಒಕ್ಕೂಟದ ಅಧ್ಯಕ್ಷರಾದ ಕವಿತಾ ಲೋಕನಾಥ್, ಕಾರ್ಯದರ್ಶಿ ಸುಮಿ ರಾಜನ್ ಮತ್ತು ವಿವಿಧ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಹಾಜರಿದ್ದರು.









