ಚೆಯ್ಯಂಡಾಣೆ ಮಾ 8 : ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ‘ಎ ‘ಉಪಕೇಂದ್ರ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆರೋಗ್ಯಧಿಕಾರಿ ಕನಕವತಿ ಮಕ್ಕಳ ತಾಯಂದಿರಿಗೆ ಎದೆ ಹಾಲಿನ ಮಹತ್ವದ ಬಗ್ಗೆ ತಿಳಿಸಿದರು. ಆರು ತಿಂಗಳವರೆಗೆ ಎದೆ ಹಾಲು ಮಾತ್ರ ಕೊಡಬೇಕು. ಆರು ತಿಂಗಳ ನಂತರ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ಕೊಡುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಬರುವುದಿಲ್ಲ ಹಾಗೂ ಮಕ್ಕಳ ಲಸಿಕೆಗಳನ್ನು ಕಾಲಕ್ಕೆ ಸರಿಯಾಗಿ ನಿಗದಿತ ಸಮಯದಲ್ಲಿ ಕೊಡಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿ ಮುಂದಿನ ದಿನಗಳಲ್ಲಿ ರೋಗಗಳು ಬರುದನ್ನು ತಡೆಗಟ್ಟ ಬಹುದು. ತಾಯಂದಿರು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ ಮೂರು ವರ್ಷದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹಲವಾರು ಮಕ್ಕಳು ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ಶಶಿನ್ ಕಾರ್ಯಪ್ಪ, ದ್ವಿತೀಯ ಅರುಸಿ, ತೃತೀಯ ಬಹುಮಾನ ಆರಾಧ್ಯ ಪಡೆದುಕೊಂಡರು.
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಯಂದಿರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ಅಶ್ರಫ್