ವಿರಾಜಪೇಟೆ ಮಾ.9 : ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನ ನಿತ್ಯ ಉಪಯೋಗಿಸುವ ಆಹಾರ ದಾನ್ಯ ಸೇರಿದಂತೆ ಅಡಿಗೆ ಅನಿಲದ ಬೆಲೆಯನ್ನು ನಿರಂತರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸಿ.ಪಿ.ಐ(ಎಂ) ಪಕ್ಷದ ವಿರಾಜಪೇಟೆ ನಗರ ಶಾಖೆ ಪ್ರತಿಭಟನೆ ನಡೆಸಿತು.
ಪಟ್ಟಣದ ಗಡಿಯಾರ ಕಂಬದ ಬಳಿ ಜಮಾಯಿಸಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೆಲೆ ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಮುಖಂಡ ಎ.ಸಿ. ಸಾಬು ಮಾತನಾಡಿ ಸರಕಾರಗಳು ಬಜೆಟ್ ಮಂಡನೆ ಸಂದರ್ಭ ಕೊಡಗನ್ನು ಕಡೆಗಣಿಸಿ ಕಾರ್ಮಿಕರಿಗೆ ಮತ್ತು ರೈತರಿಗೂ ಯಾವುದೇ ಯೋಜನೆಗಳನ್ನು ಜಾರಿಗೆತಂದಿಲ್ಲ. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದರು. ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ನೀಡುವುದಾಗಿ ಹೇಳಿ ಈಗ 1,150 ರೂ ಏರಿಕೆಮಾಡಲಾಗಿದೆ. ಅದಕ್ಕೆ ಸಬ್ಸಿಡಿಯು ಇಲ್ಲ. ಕೊರೊನದ ನಂತರ ಜನರು ತತ್ತರಿಸಿ ಹೋಗಿದ್ದಾರೆ. ಅದರಿಂದ ಎಲ್ಲ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಾಬು ಆಗ್ರಹಿಸಿದರು.
ಸಿಪಿಐ ಎಂ ಪಕ್ಷದ ನಗರ ಕಾರ್ಯದರ್ಶಿ ಶಾಜಿ ರಮೇಶ್ ಮಾತನಾಡಿ, ಕೇಂದ್ರ ಸರಕಾರ ಅದಿಕಾರಕ್ಕೆ ಬಂದ ನಂತರ ದಿನ ಉಪಯೋಗಿಸುವ ವಸ್ತುಗಳ ಬೆಲೆಯನ್ನು ದಿನೆ ದಿನಕ್ಕೂ ಏರಿಕೆ ಮಾಡುತ್ತಿರುವುದರಿಂದ ಕೂಲಿ ಕಾರ್ಮಿಕರು ಜೀವನ ನಡೆಸುವುದೆ ಸಮಸ್ಯೆಯಾಗಿದೆ. ಈಗಿನ ಸರಕಾರ ಅಧಿಕಾರಕ್ಕೆ ಬರುವ ಮೊದಲು ಅಡಿಗೆ ಅನಿಲಕ್ಕೆ ರೂ,600 ಮಾತ್ರ ಇತ್ತು. ಈಗ ನಾವುಗಳು ಸಾವಿರಕ್ಕೂ ಹೆಚ್ಚು ಹಣ ನೀಡಬೇಕಾಗಿದೆ. ಈ ಸರಕಾರಕ್ಕೆ ಬಡ ಕಾರ್ಮಿಕರ ಮೇಲೆ ಕರುಣೆ ಇದ್ದಲ್ಲಿ ಪಡಿತರ ಚೀಟಿ ಅಹಾರ ವಸ್ತುಗಳನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿದರು.
ಸಿಪಿಐ ಎಂ ಪಕ್ಷದ ಜಿಲ್ಲಾ ಸಮಿತಿಯ ಪದ್ಮಿನಿ, ತಾಲೂಕು ಶಾಖೆಯ ರತೀಶ್, ಹಮೀದ್, ಖಾಲಿದ್, ಖಾಶಿಂ, ಹರಿದಾಸ್, ಬಾಪುಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.