ಮಡಿಕೇರಿ ಮಾ.13 : ಚುನಾವಣಾ ಭಾಷಣದ ಸಂದರ್ಭ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಮುಸಲ್ಮಾನರ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಪೋಕ್ಲುವಿನ ಎಂ.ಎ.ಮನ್ಸೂರ್ ಆಲಿ, ತಕ್ಷಣ ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಚೋದನಾಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಮೂಡಿಸಿ ತಮಾಷೆ ನೋಡುವ ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿರುವ ಈಶ್ವರಪ್ಪ ಅವರು ಮತ್ತೆ ಮತ್ತೆ ಮತೀಯ ಭಾವನೆಗಳನ್ನು ಕೆಣಕಿ ರಾಜಕೀಯ ಲಾಭ ಮಾಡಿಕೊಳ್ಳಬಹುದೆನ್ನುವ ಭ್ರಮೆಯಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟç ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಂತೆ ಎಲ್ಲಾ ಧರ್ಮೀಯರು ಸೌಹಾರ್ದತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ ಈಶ್ವರಪ್ಪ ಅವರಂತಹ ರಾಜಕಾರಣಿಗಳು ಮುಸಲ್ಮಾನರನ್ನು ಪರಕೀಯರಂತೆ ಪ್ರತಿಬಿಂಬಿಸುತ್ತಾ ನೋವುಂಟು ಮಾಡುತ್ತಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳನ್ನು ಕೀಳಾಗಿ ಕಾಣುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.
ಚುನಾವಣೆಗಳು ಬರುತ್ತವೆ, ಹೋಗುತ್ತವೆ, ಆದರೆ ಮಾನವ ಸಂಬAಧಗಳು ಶಾಶ್ವತವಾಗಿ ಉಳಿಯಬೇಕಾಗುತ್ತದೆ. ಪ್ರೀತಿಯನ್ನು ಹಂಚುವ ಕಾರ್ಯವನ್ನು ರಾಜಕಾರಣಿಗಳು ಮಾಡಬೇಕೆ ಹೊರತು ದ್ವೇಷದ ವಿಷಬೀಜ ಬಿತ್ತುವ ಕೆಲಸವನ್ನು ಮಾಡಬಾರದು. ಚುನಾವಣೆ ಹಿನ್ನೆಲೆ ನಡೆಯುತ್ತಿರುವ ಬಿಜೆಪಿ ಸಮಾವೇಶಗಳಲ್ಲಿ ಅನ್ಯ ಧರ್ಮೀಯರಿಗೆ ನೋವುಂಟು ಮಾಡುವ ಪ್ರಚೋದನಾಕಾರಿ ಭಾಷಣಗಳನ್ನೇ ಈಶ್ವರಪ್ಪ ಅವರು ಮಾಡುತ್ತಾ ಬರುತ್ತಿದ್ದಾರೆ. ಪಕ್ಷದ ಮುಖಂಡರು ಇವರನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ತಿಳಿಸಿರುವ ಮನ್ಸೂರ್ ಆಲಿ, ಧಾರ್ಮಿಕ ನಿಂದನೆ ಮಾಡಿರುವ ಈಶ್ವರಪ್ಪ ಅವರು ಮುಸಲ್ಮಾನರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗ ಈ ರೀತಿಯ ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.










