ಮಡಿಕೇರಿ ಮಾ.15 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಅರೆಭಾಷೆ ಜನಾಂಗ ಬಾಂಧವರಿಗಾಗಿ ವಧು-ವರರ ಸಮಾವೇಶ ಇತ್ತೀಚೆಗೆ ನಡೆಯಿತು.
ನಗರದ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಯಟ್ ಕೂಡಿಗೆಯ ನಿವೃತ್ತ ಹಿರಿಯ ಉಪನ್ಯಾಸಕರಾದ ನಾಟೋಲನ ಸಾವಿತ್ರಿ ವಧು ವರರ ಸಮಾವೇಶ ಅರೆಭಾಷೆ ಜನಾಂಗ ಬಾಂಧವರಿಗೆ ಉತ್ತಮ ಸಂಬಂಧಗಳನ್ನು ಬೆಳೆಸಲು ಹೆಚ್ಚು ಸಹಕಾರಿಯಾಗಿದೆ. ಈ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಹೊರದೇಶದಲ್ಲಿ ನೆಲೆಸಿರುವ ಕೊಡಗಿನ ಅರೆಭಾಷೆ ಮಂದಿಗೆ ಇಲ್ಲಿನ ಆಚಾರ ವಿಚಾರಗಳ ಬಗ್ಗೆ ಅರಿವಿರುವುದಿಲ್ಲ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಆಚರಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ ಈ ಬಾರಿ 75 ಕ್ಕೂ ಹೆಚ್ಚಿನ ಆಕಾಂಕ್ಷಿಗಳು ವಧು-ವರರ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರವೆಂದರು.
ಪ್ರಮುಖರಾದ ಉಳುವಾರನ ರೋಶನ್ ವಧು-ವರರನ್ನು ವೇದಿಕೆಗೆ ಬರಮಾಡಿಕೊಂಡು ವಿವರಗಳನ್ನು ಸಭೆಗೆ ತಿಳಿಸಿದರು. ಸಂಘದ ನಿರ್ದೇಶಕಿ ಉಮಾದೇವಿ ಪ್ರಾರ್ಥಿಸಿ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ ವಂದಿಸಿದರು.
ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರನಯನ ನಾಗೇಶ್, ಜಂಟಿ ಕಾರ್ಯದರ್ಶಿ ಅತ್ತೈಡಿ ಕೃಷ್ಣಪ್ಪ, ನಿರ್ದೇಶಕರುಗಳಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಕುದುಪಜೆ ಶಾರದ, ಸೂದನ ಮೋಹಿನಿ, ಹೊಸೊಕ್ಲು ಟಿ.ಪೊನ್ನಪ್ಪ, ಗೋದೇಟಿರ ರಾಮಯ್ಯ, ಕುಲ್ಲಚೆಟ್ಟಿ ಪೂವಯ್ಯ ಮತ್ತಿತರರು ಪಾಲ್ಗೊಂಡು ಅರೆಭಾಷೆ ಜನಾಂಗ ಬಾಂಧವರ ವಧು-ವರರ ಸಮಾವೇಶವನ್ನು ಯಶಸ್ವಿಗೊಳಿಸಿದರು.









