ಮಡಿಕೇರಿ ಮಾ.15 : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ನಾಡ್ ಈಶ್ವರ ದೇವರ ವಾರ್ಷಿಕೋತ್ಸವದ ಪ್ರಯುಕ್ತ ನೆರ್ಪು ಪ್ರಯುಕ್ತ ಇಂದು ಎತ್ತ್ ಪೋರ್ ಮತ್ತು ವಿವಿಧ ಪೂಜಾ ಕಾರ್ಯಕ್ರಮ ನಡೆಯಿತು.
ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಅಥವಾ ಈಶ್ವರ ದೇವಸ್ಥಾನಕ್ಕೆ ಶತಶತಮಾನಗಳ ಇತಿಹಾಸವಿದ್ದು, ಇದರ ವಾರ್ಷಿಕ ಉತ್ಸವ ಈಗಾಗಲೇ ಮಾ. 8 ರಂದು ಸಂಜೆ ಕೊಡಿಮರ ನಿಲ್ಲಿಸುವುದರ ಮೂಲಕ ಆರಂಭಗೊಂಡಿತ್ತು. ಸಾವಿರಾರು ವರ್ಷಗಳ ಇತಿಹಾಸವಿರುವ ಬೊಟ್ಟಿಯತ್ ನಾಡ್ ಈಶ್ವರ ದೇವಸ್ಥಾನದಲ್ಲಿರುವ ಶಿವಲಿಂಗವು ಉದ್ಭವ ಲಿಂಗವಾಗಿದ್ದು ಆರು ಗ್ರಾಮಗಳು ಈ ದೇವಸ್ಥಾನಕ್ಕೆ ಸೇರುತ್ತದೆ.
ಕುಂದಾ, ಮುಗುಟಿಗೇರಿ, ಈಚೂರು, ಹುದೂರು, ಹಳ್ಳಿಗಟ್ಟು, ಅರ್ವತೋಕ್ಲು ಈ ಆರು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನದಲ್ಲಿ ಮಾ. 8 ರಿಂದ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಉತ್ಸವ ಮೂರ್ತಿ ಹೊರಗೆ ಬರುವ ಮೂಲಕ ವಿಶೇಷ ಪೂಜೆ ಸೇರಿದಂತೆ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಾ. 13 ಹಾಗೂ ಮಾ.14 ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಯ ಜೊತೆಗೆ ವಿಶೇಷ “ಹರಕೆ ಬೊಳಕ್” ಪೂಜೆ ಏರ್ಪಡಿಸಲಾಗಿತ್ತು. 8ನೇ ದಿನವಾದ ಇಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ನಡೆದವು.
ಸಂಜೆ ಆರು ಗ್ರಾಮಗಳ ತಕ್ಕಮುಖ್ಯಸ್ಥರು ಸೇರಿ “ಎತ್ತ್ ಪೊರ್” ದೇವಸ್ಥಾನಕ್ಕೆ ಬರುವ ಮೂಲಕ ಸಂಜೆಯ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಉತ್ಸವ ಮೂರ್ತಿ (ತಡಂಬು) ಹೊರ ಬಂದು ಸಾಂಪ್ರದಾಯಿಕ ಓಲಗ ಹಾಗೂ ಚಂಡೆಯ ನಾದಕ್ಕೆ ಹೆಜ್ಜೆ ಹಾಕಿತು. ಈ ಸಂದರ್ಭದಲ್ಲಿ ಆರು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಮಾ.16 ರಂದು ದೇವರ ಅವಭೃತ ಸ್ನಾನ (ದೇವ ಕುಳಿಪೊ) ಸಂಜೆ 4 ಗಂಟೆಗೆ ನಡೆಯಲಿದ್ದು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಇರುತ್ತದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.