ಸೋಮವಾರಪೇಟೆ ಮಾ.16 : ಗೋಣಿಕೊಪ್ಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್ ಮೇಲೆ ಚಪ್ಪಲಿ ಚಿತ್ರವನ್ನಿಟ್ಟು ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಠ ಜಾತಿ ಜಿಲ್ಲಾ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಜಿಲ್ಲಾಧ್ಯಕ್ಷ ಬಿ.ಇ.ಜಯೇಂದ್ರ, ಬಿಜೆಪಿ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟರ್ ಮೇಲೆ ಮುಖ್ಯಮಂತ್ರಿಯವರ ಭಾವಚಿತ್ರದ ಪೋಸ್ಟರ್ ಅಳವಡಿಸಿ, ಅವರ ಕಾಲಿನ ಚಪ್ಪಲಿ, ಅಂಬೇಡ್ಕರ್ ಚಿತ್ರದ ತಲೆಯ ಮೇಲೆ ಇರುವಂತೆ ವ್ಯವಸ್ಥಿತವಾಗಿ ಕಟ್ಟಿದ್ದಾರೆ. ಬಿಜೆಪಿ, ಸಂಘಪರಿವಾರದ ಕಿಡಿಕೇಡಿಗಳ ಮನಸ್ಥಿತಿ ಇಂತಹ ಕೃತ್ಯಗಳಿಂದ ತಿಳಿದು ಬರುತ್ತದೆ ಎಂದು ದೂರಿದರು.
ವಿಜಯಸಂಕಲ್ಪ ದಿನದ ಕಾರ್ಯಕ್ರಮದ ಆಯೋಜಕರು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು. ತಪ್ಪಿದಲ್ಲಿ ಮಾ.20 ರಂದು ದಲಿತಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸೋಮವಾರಪೇಟೆಯಲ್ಲೂ ಕಾಂಗ್ರೆಸ್ ನಾಯಕರಿರುವ ಪೋಸ್ಟರ್ ಮೇಲೆ, ಪ್ರಧಾನಿ ನರೇಂದ್ರ ಮೋದಿಯವರ ಚಪ್ಪಲಿಗಳು ಇರುವಂತೆ ಪೋಸ್ಟರ್ ಹಾಕಲಾಗಿದೆ. ಈ ಬಗ್ಗೆ ಡಿವೈಎಸ್‍ಪಿ ಹಾಗೂ ಇನ್‌ಸ್ಪೆಕ್ಟರ್ ಅವರಿಗೆ ಮೌಖಿಕ ದೂರು ನೀಡಿದ್ದರೂ, ಪೋಸ್ಟರ್‌ಗಳನ್ನು ತೆಗೆಸಿಲ್ಲ. ಅಧಿಕಾರಿಗಳು ಬಿಜೆಪಿ ಏಜೆಂಟ್‍ಗಳಾಗಿದ್ದಾರೆ. ಇವರನ್ನು ಕೂಡಲೆ ವರ್ಗಾವಣೆ ಮಾಡಬೇಕು. ಮುಂದೆ ಇವರಿಂದ ನ್ಯಾಯಬದ್ಧ ಚುನಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಘಟಕದ ಕಾರ್ಯದರ್ಶಿ ಎಚ್.ಮಂಜುನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ನಾಗರಾಜ್, ಪಕ್ಷದ ಪ್ರಮುಖರಾದ ಮೀನಾ ಕುಮಾರಿ, ಎಚ್.ವಿ.ಮೋಹನ್ ಉಪಸ್ಥಿತರಿದ್ದರು.