ನಾಪೋಕ್ಲು ಮಾ.16 : ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಸಂಘದ ಸದಸ್ಯರು ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಬದಿಗಳಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ನಾಪೋಕ್ಲು ಬಳಿಯ ಚೆರಿಯಪರಂಬು ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚ್ಚೆಟ್ಟೋಳಂಡ ಕುಟುಂಬಸ್ಥರು ನಡೆಸಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ಗಣ್ಯವ್ಯಕ್ತಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸೇವಾ ಕಾರ್ಯಪಡೆಯ ಸದಸ್ಯರು ನಾಪೋಕ್ಲು -ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಕಾವೇರಿನದಿ ಸೇತುವೆ ಬಳಿಯಿಂದ ಚೆರಿಯಪರಂಬು ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸುಚಿಗೊಳಿಸಿದರು.
ಕಾರ್ಯದಲ್ಲಿ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯ ಪಡೆಯ ಅಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಉಪಾಧ್ಯಕ್ಷ ಮಿಟ್ಟು ಸೋಮಯ್ಯ, ಸದಸ್ಯರಾದ ದೀಕ್ಷಿತ್ ದೇವಯ್ಯ, ಸುಧಿ ಅಪ್ಪಯ್ಯ, ಗಿರೀಶ್, ವಿಪನ್, ವಿಜು, ಲಕ್ಷ್ಮಿಕಾಂತ್, ರಾಜೇಶ್, ಅನಿಲ್ ತಮ್ಮಯ್ಯ, ಜಗದೀಶ್, ಹರೀಶ್, ಅರುಣ, ದರ್ಶನ್ ದೇವಯ್ಯ,ಮೋಹನ್ ಸೇರಿದಂತೆ 15ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು