ಮಡಿಕೇರಿ ಮಾ.17 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ಬಡಜನತೆಗೆ ಅಕ್ರಮ ಸಕ್ರಮದಡಿ ಜಾಗ ಮಂಜೂರು ಮಾಡದಿದ್ದಲ್ಲಿ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲೇಮಾಡು ನಿವಾಸಿ ಪಿ.ಎ.ಧನಂಜಯ ಭೂಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು 30 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ತಯಾರಿರುವ ಸರ್ಕಾರ ಬಡವರ ಸ್ವಾಧೀನದಲ್ಲಿರುವ 5- 10 ಸೆಂಟ್ ಜಾಗಕ್ಕೆ ಯಾಕೆ ಹಕ್ಕುಪತ್ರ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.
ಒಂದು ಸಣ್ಣ ಸೂರಿಗಾಗಿ 94ಸಿ, 94ಸಿಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಕ್ರಮ ಸಕ್ರಮದಡಿ ನೀಡಲಾಗಿರುವ ಬಡವರ ಅರ್ಜಿ ತಿರಸ್ಕೃತವಾಗುತ್ತಿದ್ದು, ಸರ್ಕಾರ ಬಡವರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ. ಕಳೆದ 15 ವರ್ಷಗಳಿಂದ ಪಾಲೇಮಾಡಿನ ಕಾನ್ಶಿರಾಂ ನಗರದಲ್ಲಿ 260 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಈ ಬಗ್ಗೆ ಅನೇಕ ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುತ್ತಾ ಬರಲಾಗುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ತಕ್ಷಣ ಪಾಲೇಮಾಡು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಜನರ ಸಂಕಷ್ಟಗಳನ್ನು ಆಲಿಸಬೇಕು. ಇಲ್ಲಿರುವ ಅರ್ಹ ಬಡ ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ, ಚರಂಡಿ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂದು ಧನಂಜಯ ಒತ್ತಾಯಿಸಿದರು.
ಈ ಬೇಡಿಕೆಗಳು ಈಡೇರದಿದ್ದಲ್ಲಿ ಚುನಾವಣೆ ಸಂದರ್ಭ ಮನೆಯ ಮುಂಭಾಗ ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ನಡೆಸಲಾಗುವುದು. ಮತದಾನಕ್ಕೆ ತೆರಳದೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲೇಮಾಡು ನಿವಾಸಿಗಳಾದ ಪಿ.ಸಿ.ಸುರೇಶ್, ಹೆಚ್.ಎ.ಮುತ್ತಮ್ಮ ಹೆಚ್.ಆರ್.ನಿಶ ಹಾಗೂ ಹೆಚ್.ಜೆ.ವೀಣಾ ಉಪಸ್ಥಿತರಿದ್ದರು.









