ಮಡಿಕೇರಿ ಮಾ.18 : ನಿಟ್ಟೂರು ಕಾರ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 4ನೇ ವರ್ಷದ ಫುಟ್ಬಾಲ್ ಪಂದ್ಯಾವಳಿಗೆ ರಾಷ್ಟ್ರೀಯ ರಗ್ಬಿ ಆಟಗಾರ ಕಾಂಡೇರ ತರುಣ್ ತಿಮ್ಮಯ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ರೀಡಾ ಸಂಸ್ಥೆಗಳು ಅಥವಾ ವಿವಿಧ ಸಂಘ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಮೂಡಿಸುವುದು ಶ್ಲಾಘನೀಯ ಎಂದರು.
ನಿಟ್ಟೂರು ಗ್ರಾ.ಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ಸಣ್ಣ ಗ್ರಾಮದಲ್ಲಿ ದೊಡ್ಡ ಮಟ್ಟದ ಕ್ರೀಡೋತ್ಸವವನ್ನು ಆಯೋಜಿಸಿ ನಿರಂತರವಾಗಿ ನಡೆಸಿಕೊಂಡು ಬರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಫುಟ್ಬಾಲ್ ಪಂದ್ಯಾವಳಿಗೆ 31 ತಂಡಗಳು ನೊಂದಾಯಿಸಿಗೊಂಡಿದ್ದು, ವಿಜೇತರಿಗೆ 50 ಸಾವಿರ ನಗದು, ರನ್ನರ್-ಅಪ್ ತಂಡಕ್ಕೆ 30 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದ್ದು, ಮಾ.20 ರಂದು ಸೋಮವಾರ ಸಂಜೆ ಫೈನಲ್ ಪಂದ್ಯ ನಡೆಯಲಿದೆ.
ವಿಜಯ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಮುಕ್ಕಾಟಿರ ವಿಕಾಸ್ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಟ್ಟೂರು ಗ್ರಾ.ಪಂ ಸದಸ್ಯರಾದ ಪಡಿಞರಂಡ ಕವಿತಾ ಪ್ರಭು, ಪ್ರಮುಖರಾದ ಪೊನ್ನಿಮಾಡ ಸಂತೋಷ್, ಹೊಟ್ಟೇಂಗಡ ಅಜಿತ್, ಪೊನ್ನಿಮಾಡ ಕಟ್ಟಿ ಪೂಣಚ್ಚ, ಪೋನ್ನಿಮಾಡ ನಂಜಪ್ಪ, ಮುಕ್ಕಾಟಿರ ತೇಜ, ರೋಷನ್. ಸೇರಿದಂತೆ ವಿಜಯ ಗ್ರಾಮೀಣ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ಕ್ರೀಡಾಪಟುಗಳು ಹಾಜರಿದ್ದರು. ಕಾರ್ಯಕ್ರಮವನ್ನು ಮುಕ್ಕಾಟಿರ ಸೋಮಯ್ಯ ಸ್ವಾಗತಿಸಿದರು.








