ಮಡಿಕೇರಿ ಮಾ.18 : ಸಮಾವೇಶಕ್ಕೆ ಎರಡು ಗಂಟೆ ತಡವಾಗಿ ಬಂದದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭಿಕರ ಕ್ಷಮೆ ಕೋರಿದರು. ಪಕ್ಕದಲ್ಲೇ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ತಡವಾಗಿ ಬಂದೆ ಎಂದು ಹೇಳುವ ಮೂಲಕ ಸಿಎಂ ಆಶ್ಚರ್ಯ ಮೂಡಿಸಿದರು.
ಯಾಕೆಂದರೆ ಸಿಎಂ ಬರುವವರೆಗೂ ಧ್ವನಿವರ್ಧಕಗಳು ಪರೀಕ್ಷೆಯ ನಿಷೇಧಾಜ್ಞೆಯನ್ನು ಮೀರಿ ಘರ್ಜಿಸುತ್ತಿದ್ದವು. ಫಲಾನುಭವಿಗಳ ಸಮಾವೇಶದ ಆಹ್ವಾನ ಪತ್ರಿಕೆಯಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮವೆಂದು ಇತ್ತು. ಮುಖ್ಯಮಂತ್ರಿಗಳ ಪ್ರವಾಸದ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 12ರಿಂದ 12.15 ರೊಳಗೆ ಮಡಿಕೇರಿ ತಲುಪಬೇಕಾಗಿತ್ತು.
ಆದರೆ ಸಿಎಂ ಎರಡು ಗಂಟೆ ತಡವಾಗಿ ಬಂದರು, ಸಭಿಕರು ಬಿಸಿಲಿನಿಂದ ಸಹನೆ ಕಳೆದುಕೊಂಡು ಮರಳಲು ನೋಡುತ್ತಿದ್ದಾಗ ಆಯೋಜಕರು ಜ್ಯೂಸ್ ಮತ್ತು ಬಿಸ್ಕೇಟ್ ನೀಡಿ ಸಮಾಧಾನ ಪಡಿಸುತ್ತಿದ್ದರು. ಗಾಂಧಿ ಮೈದಾನದ ಪಕ್ಕದಲ್ಲೇ ಇದ್ದ ಸಂತ ಮೈಕಲರ ಶಾಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿತ್ತು.







