ಸುಂಟಿಕೊಪ್ಪ,ಮಾ.21: ಕೆದಕಲ್ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಬದಿಯಲ್ಲಿ ಪ್ರವಾಸಿಗರು ಹಾಗೂ ಕೆಲವು ಗ್ರಾಮಸ್ಥರು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಚ್ಚ ಭಾರತ ಯೋಜನೆಗೆ ಕೇಂದ್ರ ಸರಕಾರ ಗ್ರಾ.ಪಂ.ಗೆ ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ಗ್ರಾ.ಪಂ. ನಿರ್ಲಕ್ಷ್ಯದಿಂದ ರಾಶಿಗಟ್ಟಲೆ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ತಂದು ಹಾಕಲಾಗುತ್ತಿದೆ. ಗ್ರಾ.ಪಂ ದಿವ್ಯ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ವಚ್ಛತೆ ಕಾಪಾಡಲು ಪ್ರತಿಯೊಂದು ಗ್ರಾ.ಪಂ ಗೂ ಕಸ ವಿಲೇವಾರಿಗಾಗಿ ಗೂಡ್ಸ್ ವಾಹನವನ್ನು ನೀಡಲಾಗಿದೆ. ವಾಹನಗಳ ಮೂಲಕ ಕಸಗಳನ್ನು ವಿಲೇವಾರಿಗೊಳಿಸದೆ, ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಗ್ರಾ.ಪಂ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ರಸ್ತೆ ಬದಿ ಕಸ ಹಾಕದಂತೆ ಸೂಚನಾ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

















