ಮಡಿಕೇರಿ ಮಾ.21 : ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ ಕೊಡವ ಮಕ್ಕಡ ಕೂಟದ 63ನೇ ಪುಸ್ತಕ “ಹೊಂಬೆಳಕು” ಇಂದು ಬಿಡುಗಡೆಗೊಂಡಿತು.
ನಗರದ ಪತ್ರಿಕಾಭವನದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಸಾಮಾಜಿಕ ಕಳಕಳಿಯ ಪುಸ್ತಕ ಇದಾಗಿದೆ ಎಂದರು.
ಮಕ್ಕಳಿಲ್ಲದ ಮನಸ್ಸುಗಳ ತುಡಿತ, ದತ್ತು ಶಿಶು ಸ್ವೀಕಾರದ ಸಾಮಾಜಿಕ ಜಾಗೃತಿ, ಜಾತಿಯನ್ನು ಮೀರಿದ ಮಾನವೀಯತೆ, ಪ್ರೀತಿ, ಸೌಹಾರ್ದತೆ, ಕುತೂಹಲ ಸೇರಿದಂತೆ ಅನೇಕ ಭಾವನಾತ್ಮಕ ವಿಚಾರಧಾರೆಗಳಿಗೆ ಒತ್ತು ನೀಡಿ ಕಥೆಯನ್ನು ಬರೆಯಲಾಗಿದೆ. ಇದು ಪ್ರಗತಿಪರ ಚಿಂತನೆಯ ಪುಸ್ತಕವಾಗಿದ್ದು, ಕೊಡವ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಹೊಂಬೆಳಕು” ಪುಸ್ತಕ ರಚನೆಕಾರ ಚಿತ್ರ ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ನಾನು ಸ್ವತ: ಕಂಡ ಕೆಲವು ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದೇನೆ. ಮೊಬೈಲ್ ಪ್ರಪಂಚದಲ್ಲಿ ಕಾದಂಬರಿಗಳು ಬಾಂಧವ್ಯ ವೃದ್ಧಿಸುವ ಕೆಲಸ ಮಾಡುತ್ತಿದ್ದು, ಸಾಹಿತ್ಯದ ಬಗ್ಗೆ ಅಭಿರುಚಿ ಇರುವವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಬರಹಗಾರ್ತಿ ಐಚಂಡ ರಶ್ಮಿ ಮಾತನಾಡಿ, ಸಮಾಜದಲ್ಲಿ ನಡೆಯುವ ಕೆಲವು ಘಟನಾವಳಿಗಳನ್ನು ತಮ್ಮ ಚಿಂತನೆಗೆ ಒಳಪಡಿಸಿ ಹೇಗೆ ಸಾಮಾಜಿಕ ಬದಲಾವಣೆ ಮಾಡಬೇಕು ಎಂಬುವುದನ್ನು ಸಾಹಿತಿಗಳು ಪುಸ್ತಕದ ಮೂಲಕ ಹೊರತರುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೊಡವ ಮಕ್ಕಡ ಕೂಟದ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮಾತನಾಡಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಬಿಂಬವಾಗಿರುವ ಪುಸ್ತಕಗಳು ಹಾಗೂ ಸಿನಿಮಾಗಳು ದಾಖಲೆಗಳಿದ್ದಂತೆ. ಇದು ಮುಂದಿನ ಯುವ ಪಿಳೀಗೆಗೆ ಸಹಕಾರಿಯಾಗಲಿದೆ ಎಂದರು.
::: ಬರಹಗಾರ ಪ್ರಕಾಶ್ ಕಾರ್ಯಪ್ಪ ಪರಿಚಯ ::: ಮಡಿಕೇರಿ ತಾಲೂಕು ವ್ಯಾಪ್ತಿಯ ಬೇಂಗೂರು ಚೇರಂಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಟ್ಟಿ ನಿವಾಸಿ ಕೊಟ್ಟುಕತ್ತಿರ ಏಲಕ್ಕಿ ಕಾರ್ಯಪ್ಪ-ರಾಗಿಣಿ ದಂಪತಿಯ ಏಕೈಕ ಪುತ್ರ.
1983ರಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪ್ರಕಾಶ್ ಕಾರ್ಯಪ್ಪ ತಮ್ಮದೇ ಆದ ಸ್ವಸ್ತಿಕ್ ಕನ್‍ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರೊಡಕ್ಟ್ಸ್ ಸಂಸ್ಥೆಯನ್ನು ಆರಂಭಿಸಿದರು. ಅಲ್ಲದೆ ಸ್ವಸ್ತಿಕ್ ಎಂಟರ್ಟೆನ್ಮೆಂಟ್, ಕೂರ್ಗ್ ಕಾಫಿವುಡ್ ಮೂವಿಸ್ ಎನ್ನುವ ಚಲನ ಚಿತ್ರ ನಿರ್ಮಾಣ, ನಿರ್ದೇಶನ ಸೇರಿದಂತೆ ನಟನೆ, ಸಾಹಿತ್ಯ ಕೃಷಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಇವರ ಪತ್ನಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ತಮ್ಮದೇ ಸ್ವಸ್ತಿಕ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಮೂಲಕ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿಯ ಇಬ್ಬರು ಪುತ್ರಿಯರು ಶೈಕ್ಷಣಿಕ ಬದುಕಿನಲ್ಲಿ ಯಶಸ್ಸಿನ ಹಾದಿ ಹಿಡಿದಿದ್ದಾರೆ.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡಗಿನಲ್ಲಿಯೇ ಅತ್ಯಧಿಕ ಚಲನಚಿತ್ರಗಳನ್ನು ನಿರ್ಮಿಸಿದ ಹಾಗೂ ನಿರ್ದೇಶಿಸಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಇವರು ಕೊಡವ ಭಾಷೆಯ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಕನ್ನಡದ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ‘ಬಾಕೆಮನೆ’ ‘ಕೊಡಗ್‍ರ ಸಿಪಾಯಿ’ ‘ಸ್ಮಶಾನ ಮೌನ’ ‘ನಾಡ ಪೆದ ಆಶಾ’ ‘ವಿಧೀರ ಕಳಿಲ್’ (ಪೊಮ್ಮಲೆ ಕೊಡಗ್) ಮತ್ತು ‘ರಂಗ ಪ್ರವೇಶ’ ಚಲನಚಿತ್ರಗಳು ಪ್ರಮುಖವಾಗಿವೆ.
ಬಾಕೆಮನೆ, ಕೊಡಗ್‍ರ ಸಿಪಾಯಿ, ಸ್ಮಶಾನಮೌನ, ದೀಕ್ಷ, ನಾಡ ಪೆದ ಆಶಾ ಚಲನಚಿತ್ರಗಳು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಸನಗೊಂಡು ಅಪಾರ ಜನಮನ್ನಣೆ ಗಳಿಸಿವೆ.
ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮ ಬೇರೆಯೇ ಪ್ರಾಕರಗಳು ಆದರು, ಅವರೆಡನ್ನು ಒಂದಾಗಿಸಿ ನಮ್ಮ ನಾಡು ನುಡಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸದಾ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿರುವ ಪ್ರಕಾಶ್ ಕಾರ್ಯಪ್ಪ ಅವರ ಏಳು ಪುಸ್ತಕಗಳು ಈಗಾಗಲೇ ಪ್ರಕಟವಾಗಿದ್ದು, “ಹೊಂಬೆಳಕು” ಎಂಟನೆ ಕೃತಿಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಖಜಾಂಚಿ ಅಮ್ಮಾಟಂಡ ಮೇದಪ್ಪ ಉಪಸ್ಥಿತರಿದ್ದರು.















