ಮಡಿಕೇರಿ ಮಾ.21 : ಈ ಬಾರಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ರೈತ ಸಂಘದ ಅಂಗ ಪಕ್ಷವಾದ ಸರ್ವೋದಯ ಕರ್ನಾಟಕ ಪಕ್ಷದಿಂದ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧಿಸುವುದು ಖಚಿತವಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘದ ಪ್ರಮುಖರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ, ರಾಷ್ಟ್ರೀಯ ಪಕ್ಷಗಳು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಅವರು ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ರಾಷ್ಟ್ರೀಯ ಪಕ್ಷಗಳು ಮನು ಸೋಮಯ್ಯ ಅವರ ವ್ಯಕ್ತಿತ್ವ ಮತ್ತು ಅಪಾರ ಜನ ಬೆಂಬಲವನ್ನು ಗಮನಿಸಿ ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ರೈತ ಸಂಘ ಬೆಳೆಗಾರರು, ಕಾರ್ಮಿಕರು, ದಲಿತರ ಪರವಾಗಿ ಜಿಲ್ಲೆಯಲ್ಲಿ ಹಲವಾರು ಹೋರಾಟ ಮಾಡಿದ್ದು, ಜನಪರ ಕಾರ್ಯಕ್ರಮಗಳನ್ನು ನಡೆಸಿದೆ. ಈ ಎಲ್ಲಾ ವಿಚಾರಗಳು ರಾಷ್ಟ್ರೀಯ ಪಕ್ಷಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರು. ಜನರು ಉಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡಿದರು.
ಪುಚ್ಚಿಮಾಡ ಅಪ್ಪಚ್ಚು ಮಾತನಾಡಿ, ಸರ್ವೋದಯ ಕರ್ನಾಟಕ ಪಕ್ಷ 2013ರಲ್ಲಿ ಸ್ಥಾಪನೆಯಾಗಿದ್ದು, ಕೆ.ಎಸ್. ಪುಟ್ಟಣ್ಣಯ್ಯ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ರೈತ ಸಂಘ ಜಿಲ್ಲೆಯ ಅಭಿವೃದ್ದಿ ಮತ್ತು ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಈ ಪಕ್ಷಕ್ಕೆ ಜನರು ಬೆಂಬಲ ನಿಡಬೇಕೆಂದು ಮನವಿ ಮಾಡಿದರು. ಬೇರೆ ಪಕ್ಷಗಳ ಅಪಪ್ರಚಾರಗಳಿಗೆ ಜನರು ಕಿವಿಗೊಡದಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ಪ್ರಮುಖರಾದ ಬಾಚಮಾಡ ಭವಿನ್ ಕುಮಾರ್, ಆಲೇಮಾಡ ಮಂಜುನಾಥ್, ಕಿರುಗೂರು ಗಣೇಶ್ ಉಪಸ್ಥಿತರಿದ್ದರು.














