ಶ್ರೀಮಂಗಲ ಮಾ.21 : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ, ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ ಚೆಟ್ಟಂಗಡ ಕಪ್ -2023 ಕ್ಕೆ “ಕೇರ್ ಪೂಜೆ” ನೆಮ್ಮಲೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶಾಸ್ತ್ರೋತ್ತವಾಗಿ ಜರುಗಿತು.
ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಉತ್ಸವದ ಎರಡನೇ ವರ್ಷದ ಆತಿಥ್ಯ ವಹಿಸಿಕೊಂಡಿರುವ ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬವು ಹಗ್ಗಜಗ್ಗಾಟ ಪಂದ್ಯಾವಳಿಗೆಂದೇ ಕೇರಳ ರಾಜ್ಯದ ಪರಿಣಿತ ಹಗ್ಗ ತಯಾರಿಸುವವರಿಂದ ವಿಶೇಷವಾಗಿ ತಯಾರಿಸಿಕೊಂಡು ತಂದಿರುವ ಹಗ್ಗಗಳಿಗೆ ಕುಟುಂಬದ ಹಿರಿಯರು, ಅಧ್ಯಕ್ಷ, ಆಡಳಿತ ಮಂಡಳಿ ಹಾಗೂ ಕುಟುಂಬದ ಸದಸ್ಯರ ಸಮ್ಮುದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಹಗ್ಗಜಗ್ಗಾಟರ ಸಂದರ್ಭ ಯಾವುದೇ ಕ್ರೀಡಾಪಟುಗಳಿಗೂ ಕಿಂಚಿತ್ತೂ ತೊಂದರೆಯಾಗದೆ ಕೇರ್ ಬಲಿಪ ನಮ್ಮೆ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು.
ಆರಂಭದಲ್ಲಿ ಚೆಟ್ಟಂಗಡ ಕುಟುಂಬದ ಗುರುಕಾರೋಣರ ಸನ್ನಿಧಿಯಾದ ಕೈಮಡದಲ್ಲಿ ನೂತನವಾಗಿ ತಯಾರಿಸಿದ ಹಗ್ಗಗಳನ್ನಿಟ್ಟು ಒಕ್ಕಣೆ ಕಟ್ಟಿ ಒಗ್ಗಟ್ಟಿನಿಂದ ಅತ್ಯುತ್ತಮವಾಗಿ ಕೇರ್ ಬಲಿಪ ನಮ್ಮೆ ನಡೆಸಲು ಕುಟುಂಬ ಸದಸ್ಯರಿಗೆ ಶಕ್ತಿ ಹಾಗೂ ಸೌಕರ್ಯ ನೀಡುವಂತೆ ಚೆಟ್ಟಂಗಡ ಕುಟುಂಬದ ಗುರುಕಾರೋಣರನ್ನು ಬೇಡಿಕೊಂಡು ನಂತರ ಗ್ರಾಮ ದೇವತೆ ದುರ್ಗಾ ಪರಮೇಶ್ವರಿರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು.
ನಂತರ ನಡೆದ ಪೂರ್ವಭಾವಿ ಸಭೆಯಲ್ಲಿ ಚೆಟ್ಟಂಗಡ ಕಪ್ ಕೇರ್ ಬಲಿಪ ನಮ್ಮೆಗೆ ಕುಟುಂಬದ ಹೆಸರು ನೋಂದಾಯಿಸಲು ಮಾ.24 ಅಂತಿಮ ದಿನಾಂಕ ನಿಗಧಿಪಡಿಸಿ ತೀರ್ಮಾನಿಸಲಾಯಿತು.













