ಮಡಿಕೇರಿ ಮಾ.21 : ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟು ಅಭಿವೃದ್ಧಿಯ ಸಂದರ್ಭ ದುರುಪಯೋಗ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‍ನ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಈ ಸಂಬಂಧ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4.55 ಕೋಟಿ ವೆಚ್ಚದ ಗ್ರೇಟರ್ ರಾಜಾಸೀಟು ಯೋಜನೆಯಡಿ ದೊಡ್ಡ ಮೊತ್ತದ ದುರುಪಯೋಗವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ಕೋರಲಾಗಿದೆ ಎಂದರು.
ಮಡಿಕೇರಿ ರಾಜಾಸೀಟಿನ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ 2016-17 ನೇ ಸಾಲಿನಲ್ಲಿ 4.55 ಕೋಟಿ ರೂ.ಗಳನ್ನು ಒದಗಿಸಿತ್ತು. ಇದರ ಕಾಮಗಾರಿಯನ್ನು 2020-21 ರಲ್ಲಿ ಲೋಕೋಪಯೋಗಿ ಇಲಾಖೆಗೆ ವಹಿಸಿಕೊಟ್ಟ ಬಳಿಕ, 2020 ರ ಜೂ.30 ರಿಂದ ಕಾಮಗಾರಿ ಆರಂಭಗೊಂಡಿತು. ಈ ಹಂತದಲ್ಲಿ ಮಾಜಿ ಸಚಿವ ಎಂ.ಸಿ. ನಾಣಯ್ಯ, ಅಂದಿನ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಸ್ಥಳಕ್ಕೆ ಭೇಟಿಯನ್ನಿತ್ತು ಕಾಮಗಾರಿ ನಡೆಯುತ್ತಿದ್ದ ರೀತಿಯ ಬಗ್ಗೆ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರೆಂದು ತಿಳಿಸಿದರು.
ರಾಜಾಸೀಟು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳ ಮಾಹಿತಿ ಪಡೆದು ಪರಿಶೀಲಿಸಿದಾಗ, ಮೂರು ಬಾರಿ ನಿಯಮಬಾಹಿರವಾಗಿ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ಈ ಬಗ್ಗೆ ಶಾಸಕರು ಗಮನ ಹರಿಸಿ ಸೂಕ್ತ ತನಿಖೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
::: ಶ್ವೇತ ಪತ್ರಕ್ಕೆ ಆಗ್ರಹ :::
ಮಡಿಕೇರಿ ನಗರಸಭೆಯ ಮಾಜಿ ಉಪಾಧ್ಯಕ್ಷ ಟಿ.ಎಂ.ಅಯ್ಯಪ್ಪ ಮಾತನಾಡಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸುಮಾರು 44 ಕೋಟಿ ವೆಚ್ಚದಲ್ಲಿ ನಡೆದ ಯುಜಿಡಿ(ಒಳಚರಂಡಿ) ಕಾಮಗಾರಿಯ ಸಂಪೂರ್ಣ ಮಾಹಿತಿಯ ‘ಶ್ವೇತ ಪತ್ರ’ವನ್ನು ಸಂಬಂಧಪಟ್ಟವರು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮಡಿಕೇರಿ ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿಯ ನಗರಸಭೆಯ ಬಡ್ಜೆಟ್ ಎನ್ನುವುದು ‘ಶೂನ್ಯ’ ಬಡ್ಜೆಟ್ ಆಗಿದೆ. ಕಳೆದ ಸಾಲಿನ ಬಡ್ಜೆಟ್‍ನಲ್ಲಿ ಶಾಸಕರ ವಿಶೇಷ ನಿಧಿಯಿಂದ 5 ಕೋಟಿ ರೂ. ಅನುದಾನವೆಂದು ನಮೂದು ಮಾಡಲಾಗಿತ್ತು. ಆದರೆ, ಈ ಮೊತ್ತವನ್ನು ನೀಡಿಯೇ ಇಲ್ಲವೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ನಗರಭೆಯ ಮಾಜಿ ಸದಸ್ಯರುಗಳಾದ ಕೆ.ಯು.ಅಬ್ದುಲ್ ರಜಾಕ್ ಹಾಗೂ ಟಿ.ಹೆಚ್.ಉದಯ ಕುಮಾರ್ ಉಪಸ್ಥಿತರಿದ್ದರು.














