ಸುಂಟಿಕೊಪ್ಪ ಮಾ.22 : ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ದೇವಸ್ಥಾನದ 57ನೇ ವಾರ್ಷಿಕ ಮಹಾಪೂಜೆಯು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕಳೆದ 57 ವರ್ಷಗಳಿಂದ ಗದ್ದೆಹಳ್ಳದಲ್ಲಿ ನೆಲೆನಿಂತಿರುವ ಕೊಡಂಗಲ್ಲೂರು ಭದ್ರಕಾಳಿ ಕುರುಂಬ, ಭಗವತಿ ಮಂಗಳವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ವೈದಿಕ ಕೈಂಕಾರ್ಯಗಳಿಗೆ ಚಾಲನೆ ನೀಡಲಾಯಿತು.
ಸಂಜೆ ಗಣಪತಿ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ರಾತ್ರಿ ಚಾಮುಂಡೇಶ್ವರಿ ಪೂಜೆ, ಗುಳಿಗನ ಪೂಜೆ,ಭದ್ರಕಾಳಿ ದೇವಿಗೆ ಅರ್ಚನೆ ಮತ್ತು ನೈವೇದ್ಯ ಪೂಜೆ ನೆರವೇರಿತು. ನಂತರ ದೇವಿ ಕಾರಣಿಕ ದರ್ಶನ ಭಕ್ತರಿಗೆ ನೀಡಲಾಯಿತು. ರಾತ್ರಿ,ವಸೂರಿಮಲೆ ತಲಪುರಿ ಸ್ನಾನ ಮೆರವಣಿಗೆ ಆಕರ್ಷಣೀಯವಾಗಿ ಮೂಡಿಬಂದಿತು. ಕೇರಳದ ಚಂಡೆ ವಾದ್ಯದೊಂದಿಗೆ ಹಣತೆ ಹಿಡಿದು ಮಹಿಳೆಯರು ಮಕ್ಕಳು ಮೆರವಣಿಗೆ ಮೂಲಕ ಸಾಗಿ ನಂತರ ದೇವಾಲಯದಲ್ಲಿ
ಸಮಾಪ್ತಿಗೊಂಡಿತು.
9.30 ಗಂಟೆಯಿಂದ ವಸೂರಿಮಾಲೆ ದೇವರ ಬೆಳ್ಳಾಟಂ ಮತ್ತು ದೇವಿಯ ದರ್ಶನ ನಡೆಯಿತು. ನಂತರ ದೇವಿಗೆ ತಮ್ಮ ಬೇಡಿಕೆ ಮತ್ತು ಹರಕೆ ಸಲ್ಲಿಸುವ ಮೂಲಕ ಭಕ್ತಾಧಿಗಳು ಸಂತೃಪ್ತಗೊಂಡರು.
ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಬುಧವಾರ ಬೆಳಿಗ್ಗೆ 9 ಗಂಟೆಗೆ ದೇವಿ ಹರಕೆ, 10 ರಿಂದ 11 ಗಂಟೆಯವರೆಗೆ ದೇವಿಗೆ ಅರ್ಪಣೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಸುಂಟಿಕೊಪ್ಪ, ಗದ್ದೆಹಳ್ಳ, ಬಾಳೆಕಾಡು, ಕೆದಕಲ್, ಕಂಬಿಬಾಣೆ, ನಾಕೂರು ಶಿರಂಗಾಲ, ಮಾದಾಪುರ ಸೇರಿದಂತೆ ಕೇರಳ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.