ಮಡಿಕೇರಿ ಮಾ.26 : ಕೊಡವ ಜನಾಂಗವನ್ನು ಹೈಬ್ರಿಡ್ ಜನಾಂಗವೆಂದು ಹೇಳುವ ಮೂಲಕ ಕೊಡವ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದ ಮಂಡ್ಯ ಜಿಲ್ಲೆಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅವರು “ಅಖಿಲ ಕೊಡವ ಸಮಾಜ”ಕ್ಕೆ ಪತ್ರ ಬರೆದು ಕೊಡವರ ಕ್ಷಮೆಯಾಚಿಸಿದ್ದಾರೆ.
ನಾನು ಯಾವುದೇ ದುರುದ್ದೇಶದಿಂದ ಹೇಳಿಕೆಯನ್ನು ನೀಡಲಿಲ್ಲ, ಆದಿ ಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಉತ್ತರ ನೀಡುವ ಭರದಲ್ಲಿ ಪ್ರಮಾದವಾಗಿದೆ ಹೊರತು ಕೊಡವ ಜನಾಂಗದ ಮೇಲೆ ನನಗೆ ಅಪಾರವಾದ ಗೌರವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಂತಹ ವೀರರು ಸೇರಿದಂತೆ ಲಕ್ಷಾಂತರ ವೀರ ಯೋಧರನ್ನು ನೀಡಿದ ಕೊಡವ ಜನಾಂಗದ ಮೇಲೆ ಇಡೀ ಭರತಖಂಡವೇ ಹೆಮ್ಮೆ ಪಡುತ್ತದೆ. ನನ್ನ ಮಾತಿನಿಂದ ನೋವಾಗಿದ್ದರೆ ನಾನು ಕೊಡವ ಜನಾಂಗವನ್ನು ಕ್ಷಮೆ ಕೇಳುತ್ತೇನೆ. ಇದನ್ನು ಮುಂದುವರೆಸಿಕೊAಡು ಹೋಗದಂತೆ ಕೇಳಿಕೋಳ್ಳುತ್ತೇನೆ. ಅಡ್ಡಂಡ ಕಾರ್ಯಪ್ಪನಂತಹ ವಿಚಾರಹೀನರು ಎಲ್ಲಾ ಜನಾಂಗದಲ್ಲೂ ಇದ್ದಾರೆ, ಇದು ಅವರಿಗೆ ಆಡಿದ ಮಾತು ಹೊರತು ಕೊಡವ ಸಮುದಾಯಕ್ಕೆ ಅಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಜಯಪ್ರಕಾಶ್ ಗೌಡರ ವಿವಾದಾತ್ಮಕ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಕ್ಷಮೆಯಾಚಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಮಾ.25 ರಂದು ಎಚ್ಚರಿಕೆ ನೀಡಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.










