ನಾಪೋಕ್ಲು ಮಾ.27 : ಕೊಡವ ಕ್ರಿಕೆಟ್ ಅಕಾಡೆಮಿ ಮತ್ತು ಕ್ರಿಕೆಟ್ ನಮ್ಮೆ ವತಿಯಿಂದ ಏ.22 ರಿಂದ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಕುಟುಂಬದ ಸದಸ್ಯರೆಲ್ಲರೂ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಕುಟುಂಬದ ಕ್ರಿಕೆಟ್ ಉತ್ಸವ ಅಧ್ಯಕ್ಷ ಕರ್ನಲ್, ಮಾಜಿ ಒಲಂಪಿಯನ್ ಬಾಳೆಯಡ ಕೆ.ಸುಬ್ರಮಣಿ ಹೇಳಿದರು.
ನಾಪೋಕ್ಲುವಿನ ಹಳೆತಾಲೂಕು ಸಮುದಾಯ ಭವನದಲ್ಲಿ ನಡೆದ ನಮ್ಮೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಕ್ರಿಕೆಟ್ ನಮ್ಮೆ ಆಯೋಜನೆಯಿಂದ ಜನಾಂಗದ ಎಲ್ಲರೂ ಒಗ್ಗಟ್ಟಾಗಲು ಅವಕಾಶ ದೊರಕುತ್ತದೆ. 21ನೇ ವರ್ಷದ ನಮ್ಮೆಯನ್ನು ಅಚ್ಚುಕಟ್ಟಾಗಿ ನಡೆಸಲು ಸರ್ವರು ಸಹಕರಿಸಬೇಕು ಎಂದರು.
ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಣಿ ಅವರ ಚಿಂತನೆಯಿಂದ ಆರಂಭಗೊಂಡ ಕೌಟುಂಬಿಕ ಹಾಕಿ ಕ್ರೀಡಾಕೂಟವನ್ನು ಎಲ್ಲ ಜನಾಂಗದವರು ಅನುಕರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಬಾಳೆಯಡ ಕ್ರಿಕೆಟ್ ಉತ್ಸವದಲ್ಲಿ ನೂರಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಲು ಏ.10 ತನಕ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಸಭೆಯಲ್ಲಿ ನಮ್ಮೆಯ ಯಶಸ್ವಿ ಆಯೋಜನೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭ ಬಾಳೆಯಡ ಮೆದಪ್ಪ, ಮಂದಪ್ಪ, ಅಜಿತ್, ಪ್ರತೀಶ್ ಪೂವಯ್ಯ ಶಿವು ಕುಮಾರ್, ಬಾಳೆಯಡ ಕುಟುಂಬದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









