ಮಡಿಕೇರಿ ಮಾ.28 : ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಒಂದಾದ “ಕಿಕ್ಕ್ ಸ್ಟಾರ್ಟ್” ಫುಟ್ಬಾಲ್ ತಂಡಕ್ಕೆ ಅಮ್ಮತ್ತಿಯ ಫ್ರೌಡ ಶಾಲಾ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಂಡರ್ 11 ರಿಂದ 21 ವರೆಗಿನ ವಯೋಮಾನದ ಪುರುಷ ಹಾಗೂ ಮಹಿಳಾ ತಂಡಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೊಡಗಿನ ವಿವಿಧ ಭಾಗಗಳ 400 ಕ್ಕೂ ಹೆಚ್ಚು ಯುವ ಫುಟ್ಬಾಲ್ ಆಟಗಾರರು ಭಾಗವಹಿಸಿದ್ದರು.
ಆಯ್ಕೆ ಪ್ರಕ್ರಿಯೆ ಶಿಬಿರವನ್ನು ಉದ್ಘಾಟಿಸಿದ ಮಾತನಾಡಿದ ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚಾಗಿ ಕಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಯುವ ಫುಟ್ಬಾಲ್ ಆಟಗಾರರಿಗೆ ಚಿಕ್ಕ ವಯಸ್ಸಿನಲ್ಲೇ ಪ್ರೋತ್ಸಾಹ ಹಾಗೂ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ. ಕೊಡಗು ಜಿಲ್ಲೆ ಕ್ರೀಡಾ ಜಿಲ್ಲೆಯಾಗಿದ್ದರೂ ಸಹಾ ಸೂಕ್ತ ಕ್ರೀಡಾ ವ್ಯವಸ್ಥೆಗಳು ಇಲ್ಲ.
ಆದರೂ ಕೂಡ ಜಿಲ್ಲೆಯ ಫುಟ್ಬಾಲ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನಸೆಳೆಯುತ್ತಿದ್ದಾರೆ.
ಯುವ ಫುಟ್ಬಾಲ್ ಆಟಗಾರರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿ ಅನುಭವದೊಂದಿಗೆ ಉತ್ತಮ ಫುಟ್ಬಾಲ್ ಪಟುಗಳಾಗಿ ರೂಪುಗೊಳ್ಳಬಹುದು.
ಅದೇ ರೀತಿಯಲ್ಲಿ ಆಟಗಾರರು ಕ್ರೀಡೆಯಲ್ಲಿ ಶಿಸ್ತು ಪಾಲಿಸಬೇಕಾಗಿದೆ ಎಂದು ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕರೆ ನೀಡಿದರು.
ಇತ್ತೀಚೆಗೆ ಕರ್ನಾಟಕ ತಂಡವು ಸಂತೋಷ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿತ್ತು. ಸಂತೋಷ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ ಆರು ಆಟಗಾರರು ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ನಲ್ಲಿ ತರಬೇತಿ ಪಡೆದ ಫುಟ್ಬಾಲ್ ಆಟಗಾರರಾಗಿದ್ದಾರೆ.
ಕೊಡಗು ಜಿಲ್ಲೆಯಿಂದ ಕಿಕ್ಕ್ ಸ್ಟಾರ್ಟ್ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಆಟಗಾರರಿಗೆ ಬೆಂಗಳೂರಿನಲ್ಲಿ ಕೂಡ ಮತ್ತೊಂದು ಸುತ್ತಿನ ಆಯ್ಕೆ ನಡೆಯಲಿದೆ ಎಂದು ಕಿಕ್ಕ್ ಸ್ಟಾರ್ಟ್ ತರಬೇತುದಾರರು ಮಾಹಿತಿ ನೀಡಿದರು.
ಈ ಸಂದರ್ಭ ಕಿಕ್ಕ್ ಸ್ಟಾರ್ಟ್ ಸಂಸ್ಥಾಪಕ ಹಾಗೂ ಸಿ.ಇ.ಓ ಲಕ್ಷ್ಮಣ್ ಭಟ್ ರೈ,ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪಾಣತ್ತಲೆ, ಕಾರ್ಯದರ್ಶಿ ನಾಗೇಶ್, ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಕಿಕ್ಕ್ ಸ್ಟಾರ್ಟ್ ಮ್ಯಾನೇಜರ್ ಸರ್ವಣ ಧರ್ಮಣ್, ಮುಖ್ಯ ತರಬೇತುದಾರ ರಘುಕುಮಾರ್, ತರಬೇತುದಾರ ವಿಮಲ್, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಖಜಾಂಜಿ ದೀಪು ಮಾಚಯ್ಯ, ಸದಸ್ಯರಾದ ದಿಲನ್ ಉತ್ತಯ್ಯ, ಅರುಣ್ ಕುಮಾರ್ ಅಮ್ಮತ್ತಿ, ಮಹೇಂದ್ರ ಸುಂಟ್ಟಿಕೊಪ್ಪ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ಇದ್ದರು.









