ಮಡಿಕೇರಿ ಮಾ.28 : ಜನ ಕಲ್ಯಾಣಕ್ಕಾಗಿ ಹತ್ತು ಹಲ ಕಾರ್ಯಕ್ರಮಗಳನ್ನು ರೂಪಿಸುವ ಸರ್ಕಾರ, ಇವುಗಳ ಅನುಷ್ಠಾನಕ್ಕೆ ಪೂರಕವಾಗಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಕೇಂದ್ರ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಮಂಜೂರಾತಿಯ 7.73 ಲಕ್ಷ ಹುದ್ದೆಗಳಿವೆ. ಇದರಲ್ಲಿ 5.20 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಸುಮಾರು 80 ಸಾವಿರ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು 25 ಸಾವಿರ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ ಸರ್ಕಾರದ ಯೋಜನೆಗಳ ಅನುಷ್ಟಾನ ಕಾರ್ಯಕ್ಕೆ ಇವರುಗಳ ಅಗತ್ಯತೆ ಹೆಚ್ಚಾಗಿದೆ. ಹೀಗಿದ್ದೂ, ಪ್ರಸ್ತುತ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆಯೇ ಹೊರತು, ಅವುಗಳ ಅನುಷ್ಟಾನಕ್ಕೆ ಪೂರಕವಾಗಿ ಖಾಲಿ ಹುದ್ದೆಗಳ ಭರ್ತಿಯಾಗುತ್ತಿಲ್ಲವೆಂದು ಟೀಕಿಸಿದರು.
ರಾಜ್ಯದ ವಿವಿಧ ಇಲಾಖೆಗಳಲ್ಲಿ 2001 ರಿಂದಲೇ 20 ಸಾವಿರಕ್ಕೂ ಹೆಚ್ಚಿನ ‘ಬ್ಯಾಕ್ ಲಾಗ್’ ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಉಳಿದಿದೆ. ಇಂದು ಖಾಲಿ ಇರುವ ಹುದ್ದೆಗಳ ಭರ್ತಿಗೆ ಬದಲಾಗಿ ಹೊರ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡು ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆಯೆಂದು ಆರೋಪಿಸಿದ ಶಿವಶಂಕರ, ಹೊರ ಗುತ್ತಿಗೆ ನೌಕರರನ್ನು ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಜೇಷ್ಠತಾ ಪಟ್ಟಿಗೆ ಒತ್ತಾಯ- ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಮುಂಬಡ್ತಿ ಇಲ್ಲದೆ ಶೋಷಣೆೆಗೆ ಒಳಗಾಗಿದ್ದಾರೆ. ಯಾವುದೇ ಇಲಾಖೆಯಲ್ಲಿ ನೌಕರರ ಜೇಷ್ಠತಾ ಪಟ್ಟಿ ಇಲ್ಲದಿರುವುದು ಮುಂಬಡ್ತಿಗೆ ತೊಡಕನ್ನುಂಟು ಮಾಡುತ್ತಿದೆಯೆಂದು ಆರೋಪಿಸಿ, ತಕ್ಷಣ ಎಲ್ಲಾ ಇಲಾಖೆಗಳಲ್ಲು ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ ಮುಂಬಡ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಗೌರವ ನೀಡುವಲ್ಲಿ ಜಾತಿ ಅಡ್ಡ- ಪ್ರಸ್ತುತ ರಾಜ್ಯದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸುವ ಯೋಗ್ಯತೆ, ಪ್ರತಿಭೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದಲ್ಲಿ ಇದ್ದಾರೆ. ಹೀಗಿದ್ದೂ ಅಂತಹ ಹುದ್ದೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುವಲ್ಲಿ ಜಾತಿ ಕೆಲಸ ಮಾಡುವ ಮೂಲಕ ಅವರಿಗೆ ದೊರಕದಂತೆ ಮಾಡುತ್ತಿದೆ. ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಚಂದ್ರಕಾಂತ್ ಎಂಬ ಪ್ರಾಮಾಣಿಕ, ಅಣುಭವಿ ಇದ್ದರು ಆ ಹುದ್ದೆಯಿಂದ ಅವರನ್ನು ವಂಚಿಸಲಾಗಿದೆಯೆoದು ಶಿವಶಂಕರ ಅವರು ಆರೋಪಿಸಿದರು.
ಮೂಗಿಗೆ ತುಪ್ಪ ಸವರಿದ ಸರ್ಕಾರ- ಮೀಸಲಾತಿಗಾಗಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳು ಸುದೀರ್ಘ ಧರಣಿ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶೇ.17 ರ ಮೀಸಲಾತಿಗೆ ಮತ್ತೆ ಶೇ.7 ರಷ್ಟು ಮೀಸಲಾತಿ ಸೇರಿಸುವುದಾಗಿ ತಿಳಿಸಿ ಮೂಗಿಗೆ ತುಪ್ಪ ಸವರಿದೆ. ಮೀಸಲಾತಿಯ ಹೆಚ್ಚಳದ ಬಗ್ಗೆ ಲೋಕಸಭೆಯಲ್ಲಿ ಚರ್ಚಿತವಾಗಿ ರಾಷ್ಟ್ರಪತಿಗಳ ಅಂಕಿತ ಬೀಳುವುದು ಅವಶ್ಯ. ಆದರೆ, ರಾಜ್ಯ ಸರ್ಕಾರ ಇಂತಹ ಪ್ರಸ್ತಾವನೆಯನ್ನೆ ಕೇಂದ್ರಕ್ಕೆ ಕಳುಹಿಸಿಲ್ಲವೆಂದು ಗಂಭಿರ ಆರೋಪ ಮಾಡಿದರು.
ಸರ್ಕಾರಿ ನೌಕರರ ಬೇಡಿಕೆಯಂತೆ ಎನ್‌ಪಿಎಸ್ ಪಿಂಚಣಿ ಯೋಜನೆಯ ಬದಲು ಹಳೆಯ ಪಿಂಚಣಿ ಯೋಜನೆಯನ್ನೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ನೂತನ ಸಮಿತಿ- ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕವನ್ನು ಮರು ರಚಿಸಲಾಗಿದ್ದು, ಅಧ್ಯಕ್ಷರಾಗಿ ಎಂ.ಎಸ್.ಮಹೇoದ್ರ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ.ಚಂದ್ರಮೌಳಿ, ಕೋಶಾಧ್ಯಕ್ಷರಾಗಿ ಜಿ. ಮಂಜುನಾಥ್, ಕುಶಾಲನಗರ ತಾಲ್ಲೂಕು ಅಧ್ಯಕ್ಷರಾಗಿ ನಂದೀಶ್ ಕುಮಾರ್, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಟಿ.ಎಸ್.ಮಹೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾಗಿ ಎಂ.ಎನ್. ಜನಾರ್ಧನ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಬಿ.ಎಸ್. ದಿನೇಶ್ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಎಸ್.ಕೆ. ರಾಣಿ ಅವರು ಕಾರ್ಯನಿರ್ವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆಂಪ ಸಿದ್ದಯ್ಯ, ಪದಾಧಿಕಾರಿಗಳಾದ ಸಿದ್ದರಾಜು, ಅರುಣ್, ಸತೀಶ್ ಹಾಗೂ ಮುತ್ತಪ್ಪ ಉಪಸ್ಥಿತರಿದ್ದರು.










