ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ಮತ್ತು ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ನಮ್ಮ ಪ್ರಯತ್ನ. ಕರ್ನಾಟಕದಲ್ಲಿ ಪುರುಷ ಮತದಾರರು 2,62,42,561 ಇದ್ದು, 2,59,26,319 ಮಹಿಳಾ ಮತದಾರರು ಇದ್ದಾರೆ. ಇನ್ನು ಕರ್ನಾಟಕದಲ್ಲಿ 4,699 ತೃತೀಯ ಲಿಂಗಿಗಳು ಮತದಾರರು ಇದ್ದು, 12.15 ಲಕ್ಷ ಯುವ ಮತದಾರರು ಇದ್ದಾರೆ.
ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮಾಹಿತಿ ನೀಡಿದರು. ಇದೇ ಮೊದಲ ಬಾರಿಗೆ ಮತದಾನ ಮಾಡುವ 18-19 ವಯಸ್ಸಿನ ಮತದಾರರ ಸಂಖ್ಯೆ 9,17,241. ಕರ್ನಾಟಕದಲ್ಲಿ 5.55 ಲಕ್ಷ ವಿಕಲಚೇತನ ಮತದಾರರರು ಇದ್ದಾರೆ.