ಮಡಿಕೇರಿ ಮಾ.29 : 15ನೇ ವಿಧಾನಸಭೆಯ ಅವಧಿ ಮೇ 24, 2023 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೆ ಮೊದಲು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವಂತೆ ಇದೀಗ ಚುನಾವಣಾ ದಿನಾಂಕ ನಿಗದಿಯಾಗಿದೆ. 2018ರಲ್ಲಿ ರಾಜ್ಯದಲ್ಲಿ ಶೇ. 72.4 ಮತದಾನ ನಡೆದಿತ್ತು, ಬೆಂಗಳೂರಿನಲ್ಲಿ ಕೇವಲ ಶೇ. 50 ಸರಾಸರಿ ಮತದಾನವಾಗಿತ್ತು. ಅದನ್ನು ಹೆಚ್ಚಿಸಲು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ಜೊತೆಗೂಡಿ ಐಟಿ ಕ್ಷೇತ್ರದವರ ಸಹಕಾರ ಪಡೆದು ಎಲೆಕ್ ತಾನ್ ಎಂಬ ಅಭಿಯಾನ ನಡೆಸಲಾಗುತ್ತಿದೆ. ಯಾವುದೇ ಹಿಂಸಾಚಾರವಿಲ್ಲದೆ, ಎಲ್ಲಿಯೂ ಮರು ಮತದಾನ ನಡೆಯುವ ಪ್ರಮೇಯ ಬಾರದ ಹಾಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಈಗಿರುವ ಹಾಲಿ ವಿಧಾನಸಭೆಯಲ್ಲಿ ಬಿಜೆಪಿಯ 119, ಕಾಂಗ್ರೆಸ್ ನ 69 ಹಾಗು ಜೆಡಿಎಸ್ ನ 31 ಶಾಸಕರಿದ್ದಾರೆ. ಬಿಎಸ್ಪಿಯ ಒಬ್ಬ ಶಾಸಕ ಮಹೇಶ್ ಬಿಜೆಪಿ ಸೇರಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇರುವುದರಿಂದ ಬಿಎಸ್ಪಿ ಶಾಸಕರಾಗಿ ಗುರುತಿಸಲ್ಪಡುತ್ತಾರೆ. ಇಬ್ಬರು ಪಕ್ಷೇತರ ಶಾಸಕರಾದ ಶರತ್ ಬಚ್ಚೇ ಗೌಡ ಹಾಗು ನಾಗೇಶ್ ಕಾಂಗ್ರೆಸ್ ಸೇರಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇರುವುದರಿಂದ ಪಕ್ಷೇತರ ಶಾಸಕರಾಗಿಯೇ ಗುರುತಿಸಲ್ಪಡುತ್ತಾರೆ. ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದೆ.