ಮಡಿಕೇರಿ ಮಾ.30 : ಶ್ರೀ ರಾಮನವಮಿಯನ್ನು ನಗರದೆಲ್ಲಡೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಗರದ ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಸಮೇತ ಶ್ರೀರಾಮನಿಗೆ ಪುಷ್ಪಾಲಂಕಾರ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು.
ನಂತರ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸಾಕಷ್ಟು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ವತಿಯಿಂದ ನಗರದಲ್ಲಿ ರಾಮನವಮಿ ಪ್ರಯುಕ್ತ ಶ್ರೀ ರಾಮಚಂದ್ರ ವಿಜಯೋತ್ಸವ ರಥಯಾತ್ರೆ ನಡೆಯಿತು.
ರಥಯಾತ್ರೆಯು ಶ್ರೀ ಪೇಟೆ ರಾಮಮಂದಿರದಿಂದ ಆರಂಭಗೊಂಡು, ಗಣಪತಿಬೀದಿ, ಮಹದೇವಪೇಟೆ, ಹಳೇ ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಂಡಿತು.
ರಾತ್ರಿ 8 ಗಂಟೆಗೆ ಶ್ರೀ ರಾಮಚಂದ್ರ ಕಥೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.