
ಮೈಸೂರು ಜೂ.4 NEWS DESK : ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮೈಸೂರು ನಗರದಲ್ಲಿ ಆಯೋಜಿಸಲಾದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜರ್ಷಿಗೆ ಗೌರವ ನಮನ ಸಲ್ಲಿಸಿದರು. ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಸಮೃದ್ಧಿ, ಜನರ ಸುಖ-ಶಾಂತಿ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು. ದೇವಾಲಯದ ವಿಶೇಷ ಅಧಿಕಾರಿ ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಬಳಿಕ, ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯದುವೀರ್ ಒಡೆಯರ್ ಸ್ವತಃ ಭಕ್ತರಿಗೆ ಅನ್ನ ಬಡಿಸುವ ಮೂಲಕ ಸೇವಾ ಮನೋಭಾವವನ್ನು ವ್ಯಕ್ತಪಡಿಸಿದರು. ನಂತರ ನಗರದ ಹೃದಯಭಾಗದಲ್ಲಿರುವ ಕೆ.ಆರ್. ವೃತ್ತದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಅವರ ದೂರದೃಷ್ಟಿ, ಜನಪರ ಆಡಳಿತ ಹಾಗೂ ಅಭಿವೃದ್ಧಿ ಚಿಂತನೆಗಳನ್ನು ಸ್ಮರಿಸಿದರು. ಅನಂತರ ಮೈಸೂರಿನ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದ್ದ ಅನ್ನಸಂತರ್ಪಣಾ ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು. ನಗರಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀ ಯದುವೀರ್ ಒಡೆಯರ್, “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಮೈಸೂರು ಸಂಸ್ಥಾನದ ಆಡಳಿತಗಾರರಷ್ಟೇ ಅಲ್ಲ, ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ ದೂರದೃಷ್ಟಿಯ ನಾಯಕರು. ಶಿಕ್ಷಣ, ನೀರಾವರಿ, ಆರೋಗ್ಯ, ವಿದ್ಯುತ್, ಕೈಗಾರಿಕೆ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅವರು ಕೈಗೊಂಡ ಕ್ರಮಗಳು ಇಂದಿಗೂ ಮಾದರಿಯಾಗಿವೆ” ಎಂದು ಹೇಳಿದರು. “ಇಂದಿನ ಕರ್ನಾಟಕ ಪ್ರಗತಿಪರ ರಾಜ್ಯವಾಗಿ ಗುರುತಿಸಿಕೊಳ್ಳಲು ನಾಲ್ವಡಿ ಅವರಂತಹ ಮಹಾನ್ ನಾಯಕರ ಕೊಡುಗೆ ಅಪಾರವಾಗಿದೆ. ಅವರ ಆದರ್ಶಗಳು, ಆಡಳಿತದ ದೃಷ್ಟಿಕೋನ ಹಾಗೂ ಜನಪರ ಚಿಂತನೆಗಳು ಯುವಜನತೆಗೆ ತಲುಪಬೇಕು. ಅವರ ಜೀವನಗಾಥೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು. “ಧರ್ಮ, ಜಾತಿ ಅಥವಾ ಹಿನ್ನೆಲೆ ಯಾವುದೇ ಆಗಿರಲಿ, ಸಮಾಜದಲ್ಲಿ ಪರಸ್ಪರ ಗೌರವ, ಸಹಕಾರ ಹಾಗೂ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಅನ್ನದಾನ ಮತ್ತು ಸೇವಾ ಕಾರ್ಯಕ್ರಮಗಳು ಸಮಾಜದ ಒಗ್ಗಟ್ಟನ್ನು ಬಲಪಡಿಸುವ ಶಕ್ತಿಯಾಗಿವೆ” ಎಂದು ಹೇಳಿದರು. “ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸಿನ ಸುವರ್ಣ ಮೈಸೂರಿನ ಮಾದರಿಯಲ್ಲಿ ಅಭಿವೃದ್ಧಿ ಹೊಂದಿದ, ಸಮೃದ್ಧ ಮತ್ತು ಸಾಂಸ್ಕೃತಿಕವಾಗಿ ಶಕ್ತಿಶಾಲಿ ಕರ್ನಾಟಕವನ್ನು ನಿರ್ಮಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಅವರ ಮೌಲ್ಯಗಳು ಮತ್ತು ಆದರ್ಶಗಳನ್ನು ಅನುಸರಿಸುವ ಮೂಲಕವೇ ನಾವು ಅವರಿಗೆ ಅರ್ಥಪೂರ್ಣ ನಮನ ಸಲ್ಲಿಸಬಹುದು” ಎಂದು ಯದುವೀರ್ ಒಡೆಯರ್ ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು, ಸಾರ್ವಜನಿಕರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.









