ಮಡಿಕೇರಿ ಏ.2 : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಇಲಾಖೆಯಿಂದ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 14 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಜಿಲ್ಲೆಯಿಂದ ಹೊರ ಹೋಗುವ ಮತ್ತು ಒಳ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ 3 ಅಂತರ್ ರಾಜ್ಯ ಚೆಕ್‌ಪೋಸ್ಟ್ ತೆರೆಯಲಾಗಿದೆ. ಕೇರಳ ಗಡಿಯ ಕರಿಕೆ, ಮಾಕುಟ್ಟ ಹಾಗೂ ಪೆರುಂಬಾಡಿ ಅಂತರ್ ರಾಜ್ಯ ಚೆಕ್‌ಪೋಸ್ಟ್ ಗಳಾಗಿದ್ದು, 11 ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಗಳು ಕಾರ್ಯಾಚರಿಸುತ್ತಿವೆ. ಮೈಸೂರು, ಹಾಸನ, ಸುಳ್ಯ ಸಂಪರ್ಕಿಸುವ ಪ್ರದೇಶಗಳಲ್ಲಿ 100 ಮೀಟರ್ ಅಂತರದಲ್ಲಿ ತಲಾ 2 ಚೆಕ್‌ಪೋಸ್ಟ್ ತೆರೆಯಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಕೊಡಗಿನಿಂದ ಹೊರ ಹೋಗುವ ವಾಹನಗಳನ್ನು ಕೊಡಗು ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕೊಡಗು ಪ್ರವೇಶಿಸುವ ವಾಹನಗಳನ್ನು ಅಂತರ್ ಜಿಲ್ಲಾ ಚೆಕ್‌ಪೋಸ್ಟ್ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ತಯಾರಿಕೆ ಮತ್ತಿತ್ತರ ನಿಯಮಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಪೊಲೀಸ್ ಇಲಾಖೆ ಅಕ್ರಮ ಹಣ ಸಾಗಾಟ, ಆಮಿಷ ಒಡ್ಡುವ ವಸ್ತುಗಳು, ಗಾಂಜಾ ಮಾರಾಟ ಮತ್ತಿತ್ತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸಿದೆ.
::: ಹೆಚ್ಚುವರಿ ಸಿಬ್ಬಂದಿ :::
ಈಗಾಗಲೇ ಸೂಕ್ಷ್ಮ ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಪೊಲೀಸ್ ಇಲಾಖೆ ಗುರುತು ಮಾಡಿದೆ. ಚುನಾವಣಾ ಸಂದರ್ಭ ಈ ಮತಗಟ್ಟೆಗಳಿಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಹೊರ ರಾಜ್ಯಗಳಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರ ಸಜ್ಜಿತ ಯೋಧರನ್ನು ಕೊಡಗು ಜಿಲ್ಲೆಗೆ ಕರೆಸಲಾಗುತ್ತಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಕೆಲವು ಚೆಕ್ ಪೋಸ್ಟ್ಗಳಲ್ಲಿಯೂ ಇವರನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗುತ್ತದೆ.
ಭಯಮುಕ್ತ, ಪಾರದರ್ಶಕ ಚುನಾವಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಈಗಾಗಲೇ ಅಪರಾಧ ಪ್ರಕರಣದ ಇಬ್ಬರನ್ನು ಗಡಿಪಾರು ಮಾಡಲಾಗಿದ್ದು, ಉಳಿದ 6 ಮಂದಿಯ ಗಡಿಪಾರಿಗೆ ವಿಚಾರಣೆ ನಡೆಯುತ್ತಿದೆ. ಒಟ್ಟು 600 ಮಂದಿಯ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.