ವಿರಾಜಪೇಟೆ ಏ.3 : ಜೆ.ಡಿ.ಎಸ್. ಪಕ್ಷದಲ್ಲಿ ಸಕ್ರೀಯರಾಗಿದ್ದು, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಪಕ್ಷದ ಪ್ರಮುಖರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಳಲೆ ಮತ್ತು ಚೆನ್ನಯ್ಯನಕೋಟೆ ಗ್ರಾಮದ ಜೆ.ಡಿ.ಎಸ್ ಪ್ರಮುಖ ನಾಯಕರಾದ ಎಂ.ಸಿ.ದೇವಯ್ಯ, ಅಕ್ಬರ್, ವಿ.ಸಿ.ದೇವರಾಜ್ ಮತ್ತು ಎಂ.ಕೆ.ವಸಂತ್ ಅವರುಗಳನ್ನು ಎ.ಎಸ್. ಪೊನ್ನಣ್ಣ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಜಾತ್ಯಾತೀತ ನಿಲುವುಗಳ ಮೇಲೆ ತತ್ವ ಸಿದ್ದಾಂತಗಳನ್ನು ಒಪ್ಪಿ ಸಮರ್ಥ ನಾಯಕರನ್ನು ಚುನಾಯಿಸುವ ದೃಷ್ಟಿಯಿಂದ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡಿರುವವರಿಗೆ ಅಭಿನಂದನೆ ಸಲ್ಲಿಸಿದರು. ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಒತ್ತು ನೀಡಿ ಎಂದು ಹೇಳಿದರು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಮಾತನಾಡಿ, ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಆನೆ ಬಲ ಬಂದಂತಾಗಿದೆ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಯನ್ನು ಚುನಾಯಿಸುವಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ಮಂಡೇಟಿರ ಅನೀಲ್ ಹಾಗೂ ವಿವಿಧ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ