ಮಡಿಕೇರಿ ಏ.5 : ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರಿಕರ ಗ್ರಾಮದೊಳಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಹಾಗೂ ಕಾಟಿಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಅರಣ್ಯ ಇಲಾಖೆ ರೂ.16 ಲಕ್ಷ ವೆಚ್ಚದಲ್ಲಿ 2.25 ಮೀಟರ್ ಎತ್ತರ ಹಾಗೂ 75 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಮಾಡಿ ಒಂದು ತಿಂಗಳಾಗಿದೆ.ಈವರೆಗೂ ಆನೆಗಳು ಗ್ರಾಮದೊಳಗೆ ಕಾಣಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ.
ಸಮೀಪದ ಮಾಲಂಬಿ ಮೀಸಲು ಅರಣ್ಯದಿಂದ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದ ಮೂಲಕ ಸಂಚರಿಸುತ್ತಿದ್ದ ಕಾಡಾನೆಗಳು, ಕಾಟಿಗಳು ಕೂಗೂರು, ಚಿಕ್ಕಾರ ಇತರ ಗ್ರಾಮಗಳಲ್ಲಿ ಬೀಡುಬಿಟ್ಟು ತೋಟ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿ ಬೆಳೆ ಹಾನಿ ಮಾಡುತ್ತಿದ್ದವು.ಕಾಡಾನೆಗಳು ಹಾಗೂ ಕಾಟಿಗಳು ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದರು.
ಈ ಹಿಂದೆ ಹಿರಿಕರ ಗ್ರಾಮದ ರೈತ ಮಹಿಳೆಯೊಬ್ಬರ ಕಾಫಿ ತೋಟದ ಅಂಚಿನಲ್ಲಿ ಆನೆಗಳು ಬರುತ್ತಿದ್ದ ಜಾಗ ಗುರುತಿಸಿ ಕಂದಕ ನಿರ್ಮಾಣ ಮಾಡಲಾಗಿತ್ತು.ಮಣ್ಣು ಕುಸಿದು ಕಂದಕ ಮುಚ್ಚಿಹೋದ ನಂತರ ಮತ್ತೆ ಕಾಡಾನೆಗಳ ಸಂಚಾರ ಆರಂಭವಾಗಿತ್ತು.ರೈತರ ಅಳಲಿಗೆ ಸ್ಪಂದಿಸಿದ ಅರಣ್ಯ ಇಲಾಖೆ ನೂತನ ಪ್ರಯೋಗವಾಗಿ ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ನಿರ್ಮಿಸಿದೆ.
ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಮಾತನಾಡಿ, “ಜಿಲ್ಲೆಯ ಮಾಕುಟ್ಟ ಭಾಗದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿದ ಸಿಮೆಂಟ್ ಪಿಲ್ಲರ್ ತಡೆಗೋಡೆ ಯಶಸ್ವಿಯಾಗಿದೆ.ಹಿರಿಕರ ಗ್ರಾಮದಲ್ಲೂ ಪ್ರಾಯೋಗಿಕವಾಗಿ 75 ಮೀಟರ್ ವರೆಗೆ ತಡೆಗೋಡೆ ನಿರ್ಮಾಣವಾಗಿದೆ.ವೆಚ್ಚವೂ ಅಧಿಕವಿಲ್ಲ.ಆನೆಗಳಿಂದ ತಡೆಗೋಡೆ ಉರುಳಿಸಲು ಸಾಧ್ಯವಿಲ್ಲ.ತಡೆಗೋಡೆ ನಿರ್ಮಿಸಿ ತಿಂಗಳಾದರೂ ಆನೆ, ಕಾಟಿಯ ಸುಳಿವಿಲ್ಲ.ಕೂಗೂರು, ಚಿಕ್ಕಾರ ಗ್ರಾಮಗಳಲ್ಲು ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಿದ್ದು ಇಲಾಖೆ ಅನುಮತಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಕಾಡಾನೆ, ಕಾಟಿಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ನಿರ್ಮಿಸಿರುವ ಸಿಮೆಂಟ್ ಪಿಲ್ಲರ್ ತಡೆಗೋಡೆಯಿಂದ ರೈತರ ಆತಂಕ ಕಡಿಮೆಯಾಗಿದೆ.ಬೆಳೆ ಹಾನಿಗೆ ಪರಿಹಾರ ಸಿಕ್ಕಂತಾಗಿದೆ” ಎಂದು ಕೆಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ವರದಿ : -ಶ.ಗ.ನಯನತಾರಾ
ಪತ್ರಕರ್ತೆ, ಶನಿವಾರಸಂತೆ.