
ಮಡಿಕೇರಿ NEWS DESK ಫೆ.20 : ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ (ರಿ) ವತಿಯಿಂದ ಇದೇ ಏ.24 ಮತ್ತು 25 ರಂದು ನಡೆಯಲಿರುವ ಸಂಭ್ರಮದ ಕೆಸಿಎ ಕ್ರಿಕೆಟ್ ಟೂರ್ನಿಯ ಪೂರ್ವಭಾವಿ ಸಭೆ ವಿರಾಜಪೇಟೆಯಲ್ಲಿ ನಡೆಯಿತು.
ಅಸೋಸಿಯೇಷನ್ ನ ಅಧ್ಯಕ್ಷ ಎ.ಜೆ.ಬಾಬು ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಕ್ರಿಕೆಟ್ ಟೂರ್ನಿಯ ಯಶಸ್ಸಿಗೆ ಅಗತ್ಯವಿರುವ ರೂಪರೇಷಗಳ ಕುರಿತು ಚರ್ಚಿಸಿದರು. ಸಮುದಾಯದ ಸಂಘಟನೆ ಹಾಗೂ ಮನೋರಂಜನೆಗಾಗಿ ಕ್ರಿಕೆಟ್ ಟೂರ್ನಿಯೊಂದಿಗೆ ಹಗ್ಗಜಗ್ಗಾಟ, ಥ್ರೋಬಾಲ್ ಮತ್ತು ಶಾಟ್ ಪೂಟ್ ಸ್ಪರ್ಧೆಯನ್ನು ಎರಡು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಯಿತು. ಕೆಸಿಎ ಕ್ರಿಕೆಟ್ ಟೂರ್ನಿಯ ವಿಜೇತ ತಂಡಕ್ಕೆ ರೂ.1 ಲಕ್ಷ ಮತ್ತು ದ್ವಿತೀಯ ರೂ.50 ಸಾವಿರ ನಗದು ಬಹುಮಾನ ನೀಡಲಾಗುವುದು. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಶಾಟ್ ಪೂಟ್ ಮತ್ತು ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯ ನಡೆಯಲಿದೆ. ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿಯೊಂದು ಸ್ಪರ್ಧೆಯ ವಿಜೇತರಿಗೂ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಡಾಡು ಜೋಸೆಫ್ (9483303676), ಜೋಬಿ ಅಮ್ಮತ್ತಿ (8123823860) ಅವರನ್ನು ಸಂಪರ್ಕಿಸಬಹುದಾಗಿದೆ. ಸಭೆಯಲ್ಲಿ ಕಾರ್ಯದರ್ಶಿ ಸಿ.ಜೆ.ಅಂತೋಣಿ, ಜಂಟಿ ಕಾರ್ಯದರ್ಶಿ ಬಿಂದುಸಾರ, ಖಜಾಂಚಿ ಬೇಬಿ ಎಂ.ಟಿ, ಪ್ರಮುಖರಾದ ಜೋಬಿ ಅಮ್ಮತ್ತಿ, ಪ್ರವೀಣ್ ಜಾನ್ಸನ್, ರಿಜೋಶ್ ಜೋಸೆಫ್, ಅಂತೋಣಿ ರಾಬಿನ್, ಬಿನೀಶ್, ಅಂತೋಣಿ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು.










