ಮಡಿಕೇರಿ ಏ.5 : ಶಿಕ್ಷಣ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಿರುವ ಜನಾಂಗ ಬಾಂಧವರು ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಆಗಿವೆ ಎಂದು ಮಕ್ಕಳ ತಜ್ಞ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಹೇಳಿದರು.
ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ “ಕುದುಕುಳಿ ಐನ್‍ಮನೆ ಕ್ರಿಕೆಟ್ ಕಪ್-2023” ಅನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಅರೆಭಾಷೆ ಗೌಡರ ಸಂಖ್ಯೆ ಕೊಡಗಿನಲ್ಲಿ ಅಧಿಕ ಇದ್ದು, ಜನಾಂಗದವರು ತಮ್ಮ ಶಕ್ತಿಯನ್ನು ಅರಿತುಕೊಂಡಾಗ ಉತ್ತಮ ಕ್ರೀಡಾಕೂಟವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲು ಸಾಧ್ಯ ಎಂದರು.
ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಟ್ರೋಫಿ ಅನಾವರಣಗೊಳಿಸಿ, ಕೌಟುಂಬಿಕ ಪಂದ್ಯಾವಳಿಯು ಜನಾಂಗವನ್ನು ಒಗ್ಗೂಡಿಸಲು ಒಂದು ಉತ್ತಮ ವೇದಿಕೆ ಎಂದರು.
ಕಾವೇರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಆನೆರ ಜಾನಕಿ ಮೋಹನ್ ಮಾತನಾಡಿ, ಸಾಮರಸ್ಯ ಸಹಕಾರ ಮನೋಭಾವನೆ ಬೆಳೆಯಲು ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದರು.
ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಕ್ರಿಕೆಟ್ ಸಮಿತಿಯ ಅಧ್ಯಕ್ಷ ಕುದುಕುಳಿ ಅಕ್ಷಯ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುದುಕುಳಿ ಕುಟುಂಬದ ಪಟ್ಟೆದಾರ ಕುದುಕುಳಿ ಯು.ಕೃಷ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುದುಕುಳಿ ಕುಟುಂಬ ಸಂಘದ ಅಧ್ಯಕ್ಷ ಕುದುಕುಳಿ ಬಿ.ಮೋಹನ್, ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್, ಕೊಡಗು ಗೌಡ ಯುವ ವೇದಿಕೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕ್ರಿಕೆಟ್ ಸಮಿತಿ ಸಲಹೆಗಾರ ಕುದುಕುಳಿ ಜೆ.ಭರತ್ ಹಾಜರಿದ್ದರು.
ಕುದುಕುಳಿ ಕಿಶೋರ್ ಸ್ವಾಗತಿಸಿದರು, ಚೈತ್ರಾ ನಿರೂಪಿಸಿದರು. ದಿವ್ಯಚಿಂತನ್ ಪ್ರಾರ್ಥಿಸಿದರು.
ಕೊಡಗು ಗೌಡ ಯುವ ವೇದಿಕೆ ಹಾಗೂ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. 10 ದಿನಗಳ ಕಾಲ ಗೌಡ ಕುಟುಂಬಗಳ ನಡುವೆ ಪಂದ್ಯಾವಳಿ ನಡೆಯಲಿದೆ.









