ಮಡಿಕೇರಿ ಏ.5 : ಚೆಟ್ಟಂಗಡ ಕುಟುಂಬ ಆಶ್ರಯದಲ್ಲಿ ನಡೆದ ಕೊಡವ ಕೌಟುಂಬಿಕ ಕೇರ್‌ಬಲಿ ನಮ್ಮೆಯು ಟಿ.ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಪುರುಷರ ವಿಭಾಗದಲ್ಲಿ ಮಾಳೇಟಿರ ತಂಡ ಹಾಗೂ ಮಹಿಳೆಯರ ವಿಭಾಗದ ಅಣ್ಣಳಮಾಡ ತಂಡ ಚಾಂಪಿಯನ್ ಪಟ್ಟ ಪಡೆಯುವ ಮೂಲಕ ತಲಾ ರೂ.50 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿತು.
ರನ್ನರ್ಸ್ ಪ್ರಶಸ್ತಿ ಹಾಗೂ ತಲಾ ರೂ.30 ಸಾವಿರ ನಗದನ್ನು ಪುರುಷರ ವಿಭಾಗದಲ್ಲಿ ಮಾಳೇಟಿರ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಅಜ್ಜಮಾಡ ತಂಡ ಪ್ರಶಸ್ತಿ ಪಡೆಯಿತು.
ಮೂರನೇ ಸ್ಥಾನವನ್ನು ಪುರುಷರ ವಿಭಾಗದಲ್ಲಿ ಚಂಗಲಂಡ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಕಾಂಡಂಡ ತಂಡ ತಲಾ ರೂ.20 ಸಾವಿರ ನಗದು ಮತ್ತು ಪ್ರಶಸ್ತಿ ಪಡೆಯಿತು.
ಪಂದ್ಯಾವಳಿಯಲ್ಲಿ 102 ಪುರುಷರ ಮತ್ತು 75 ಮಹಿಳೆಯರ ತಂಡ ಭಾಗವಹಿಸಿದ್ದವು.
ಸಮಾರೋಪ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಒಲಂಪಿಯನ್ ನಿವೃತ್ತ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಕ್ರೀಡೆಗೆ ಕೊಡವ ಕುಟುಂಬಗಳು ಉತ್ತೇಜನ ನೀಡುತ್ತಿದ್ದು, ಮುಂದೆಯೂ ಯಶಸ್ವಿಯಾಗಿ ನಡೆಯಲಿದೆ ಎಂದರು.
ತಾವಳಗೇರಿ ಮೂಂದ್ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ, ಚದುರಿಹೋಗಿರುವ ಕೊಡವ ಕುಟುಂಬಗಳು ಕ್ರೀಡೆಯಿಂದ ಒಂದೆಡೆ ಸೇರಲು ಅವಕಾಶವಾಗಿದೆ. ಗ್ರಾಮೀಣ ಕ್ರೀಡೆಗಳಿಗೂ ಮುಂದಿನ ದಿನಗಳಲ್ಲಿ ಉತ್ತೇಜನ ದೊರೆಯುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಹೈಕೋರ್ಟ್ ವಕೀಲ, ರಾಜ್ಯ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಅಕಾಡೆಮಿ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಪೊನ್ನೋಲತಂಡ ಭವ್ಯ ಪೊನ್ನಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷೆ ಚೊಟ್ಟೆಯಾಂಡಮಾಡ ಸಂತಾ ತಮ್ಮಯ್ಯ, ಚೆಟ್ಟಂಗಡ ಕುಟುಂಬ ಅಧ್ಯಕ್ಷ ವಿಜಯ ಕಾರ್ಯಪ್ಪ, ಕುಟುಂಬದ ಹಿರಿಯರಾದ ಅರಸು ಅಚ್ಚಪ್ಪ, ವಿಠಲ ಬೋಪಣ್ಣ, ಡಾಲಿ, ರಮೇಶ್ ಸೋಮಯ್ಯ, ಮಿಟ್ಟು ಪೂಣಚ್ಚ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯ ಕಾರ್ಯಪ್ಪ ಸ್ವಾಗತಿಸಿ, ಅಶ್ವಿನಿ ವಸಂತ್ ವಂದಿಸಿದರು. ಚೆಟ್ಟಂಗಡ ಕುಟುಂಬ ಕಾರ್ಯದರ್ಶಿ ರವಿ ಸುಬ್ಬಯ್ಯ ವೀಕ್ಷಕ ವಿವರಣೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.