ಮಡಿಕೇರಿ ಏ.5 : ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಕಳೆದ ಎರಡು ದಿನಗಳಿಂದ ಕಡಿಮೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೌರಾಯುಕ್ತರಾದ ವಿಜಯ್ ಅವರು ಇಂದು ಕೂಟುಹೊಳೆಗೆ ಭೇಟಿ ನೀಡಿ ವೀಕ್ಷಿಸಿದರು. ನಗರಸಭೆಯ ಸಹಾಯಕ ಅಭಿಯಂತರರು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿಯಂತರರು ಹಾಗೂ ಸೀನಿಯರ್ ವಾಲ್ ಮೆನ್ ಗಳೊಂದಿಗೆ ಕೂಟುಹೊಳೆ ಜಾಕ್ ವೆಲ್ ಗೆ ಹಾಗೂ ಕುಂಡಮೇಸ್ತ್ರಿ ಜಾಕ್ ವೆಲ್ ಗೆ ಪರಿಶೀಲಿಸಲಾಯಿತು. ಪ್ರಸ್ತುತ ಇದುವರೆಗೂ ಮಳೆಯಾಗದ ಕಾರಣ ಕೂಟುಹೊಳೆಯಲ್ಲಿ ಸಂಪೂರ್ಣ ನೀರಿಲ್ಲದೆ ಬತ್ತಿದ್ದು ಇವಾಗ ಕುಂಡಾಮೇಸ್ತ್ರಿಯಿಂದ ಲಿಫ್ಟ್ ಮಾಡಿ ಕೂಟುಹೊಳೆಯಿಂದ ರನ್ ಮಾಡಿ ನಗರಕ್ಕೆ ನೀರನ್ನು ಒದಗಿಸಲಾಗುತ್ತಿದೆ. ಇದೇ ರೀತಿ ಮಳೆ ಆಗದಿದ್ದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರನ್ನು ಕೊರತೆ ಉಂಟಾಗುವುದರಿಂದ ಇದನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ 23 ವಾರ್ಡ್ ಗಳಲ್ಲಿ ದಿನ ಬಿಟ್ಟು ದಿನ ನೀರನ್ನು ನೀಡುವಂತಹ ಸಲಹೆಗಳು ಬಂದಿವೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.












