ನಾಪೋಕ್ಲು ಏ.6 : ಬೇಸಿಗೆಯ ತಾಪಮಾನ ಅಧಿಕವಾಗುತ್ತಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ. ಕಳೆದ ಮೂರು ದಿನಗಳಿಂದ ಇದೇ ರೀತಿಯ ಹವಾಗುಣವಿದ್ದು, ಜನ ಮಳೆಗಾಗಿ ಎದುರು ನೋಡುತ್ತಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆ ಸುರಿದು ತಂಪಾಗಿದೆ. ಬಲ್ಲಮಾವಟಿ, ನೆಲಜಿ, ಎಮ್ಮೆಮಾಡು , ಕಕ್ಕಬ್ಬೆ, ಕೋಟೇರಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ 96 ಸೆಂಟ್ ಮಳೆಯಾಗಿದೆ. ಗಾಳಿ ಮಳೆಗೆ ನಾಪೋಕ್ಲು – ಕಕ್ಕಬೆ ಮುಖ್ಯ ಸಂಪರ್ಕ ರಸ್ತೆಯ ಕೋಟೇರಿಯಲ್ಲಿ ಮರವೊಂದು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮತ್ತೆ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿದೆ.
ವರದಿ : ದುಗ್ಗಳ ಸದಾನಂದ